ಮುಂಬಯಿ, ಜು08(Daijiworld News/SS): ಮಹಾನಗರಿ ಮುಂಬಯಿಯಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ, ಆಗಮನ - ನಿರ್ಗಮನದಲ್ಲಿ ತೀವ್ರವಾಗಿ ವ್ಯತ್ಯಯ ಉಂಟಾಗಿದೆ.

ಜು.07ರಿಂದಲೇ ವಿಮಾನ ನಿಲ್ದಾಣದಲ್ಲಿನ ಕಾರ್ಯಾಚರಣೆಗಳನ್ನು ಪ್ರತಿಕೂಲ ಹವಾಮಾನದ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಇಂದು ಕೂಡ ಭಾರೀ ಮಳೆ ಸುರಿಯಲಾರಂಭಿಸಿದ್ದು ಗೋಚರತೆ ಅತ್ಯಂತ ನಿಕೃಷ್ಟ ಮಟ್ಟಕ್ಕೆ ಇಳಿದಿದೆ. ಪರಿಣಾಮವಾಗಿ ವಿಮಾನ ಹಾರಾಟಗಳನ್ನು ರದ್ದು ಪಡಿಸಲಾಯಿತು. ಮಾತ್ರವಲ್ಲದೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳ ಹಾರಾಟ ತೀವ್ರವಾಗಿ ವಿಳಂಬಗೊಂಡವು ಎಂದು ಮೂಲಗಳಿಂದ ತಿಳಿದುಬಂದಿದೆ.
ಜು.08ರಂದು ಬೆಳಗ್ಗೆ 9.30ರಿಂದ ವಿಮಾನ ನಿಲ್ದಾಣದಲ್ಲಿನ ಗೋಚರತೆಯಲ್ಲಿ ತೀವ್ರ ಏರುಪೇರು ಉಂಟಾಗಿದ್ದು ವಿಮಾನಗಳ ಆಗಮನ, ನಿರ್ಗಮನ ವಿಳಂಬವಾಗಲು ಕಾರಣವಾಯಿತು. ಬೆಳಗ್ಗಿನ ಅವಧಿಯಲ್ಲಿ ಇಲ್ಲಿಗೆ ಬರಲಿದ್ದ ವಿಮಾನಗಳ ಮಾರ್ಗವನ್ನು ಬದಲಾಯಿಸಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬಯಿ ಮಹಾನಗರಿಯಲ್ಲಿ ಕಳೆದ ಕೆಲವು ದಿನಗಳಿಂದ ಜಡಿ ಮಳೆಯಾಗುತ್ತಿದೆ. ಈ ವಾರ ಮಳೆ ಇನ್ನೂ ಹೆಚ್ಚಾಗಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮಹಾನಗರಿಯ ಅನೇಕ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು ರೈಲು ಸಂಚಾರದಲ್ಲಿ ಕೂಡ ಬದಲಾವಣೆಗಳು ಆಗಿದೆ ಎನ್ನಲಾಗಿದೆ.