ಬೆಂಗಳೂರು, ಜು 08 (DaijiworldNews/SM): ರಾಜ್ಯದಲ್ಲಿನ ಸರಕಾರಕ್ಕೆ ಎದುರಾಗಿರುವ ರಾಜೀನಾಮೆ ಪರ್ವದಿಂದಾಗಿ ದೋಸ್ತಿ ಪಕ್ಷಗಳ ಪ್ರಮುಖ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಸರಕಾರ ಇಳಿಸಿಕೊಳ್ಳಲು ನಾಯಕರು ಎಲ್ಲಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಸಚಿವ ಡಿಕೆಶಿ ಮುಂಬೈಯತ್ತ ದೌಡಾಯಿಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಾಯಕರು ಮುಂಬೈನಲ್ಲಿದ್ದು, ಡಿ.ಕೆ.ಶಿವಕುಮಾರ್ ಭೇಟಿ ಕುತೂಹಲವನ್ನು ಕೆರಳಿಸಿದೆ. ಜುಲೈ ೮ರಂದು ಸರಣಿ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಇದೀಗ ಸರ್ಕಾರ ಉಳಿಸಿಕೊಳ್ಳಲು ಕೊನೇ ಕ್ಷಣದ ಕಸರತ್ತನ್ನು ನಡೆಸುತ್ತಿದ್ದಾರೆ. ಶನಿವಾರ ಕಾಂಗ್ರೆಸ್ನ 9 ಶಾಸಕರು ರಾಜೀನಾಮೆ ನೀಡಿದ್ದಾರೆ. ಇವರಲ್ಲಿ ರಾಮಲಿಂಗಾ ರೆಡ್ಡಿ ಮತ್ತು ಮುನಿರತ್ನ ಹೊರತುಪಡಿಸಿ ಉಳಿದ ನಾಯಕರು ಮುಂಬೈನಲ್ಲಿದ್ದಾರೆ. ಮೂವರು ಜೆಡಿಎಸ್ ಶಾಸಕರು ಸಹ ಮುಂಬೈನ ಸೋಫಿಟೆಲ್ ಹೋಟೆಲ್ನಲ್ಲಿ ತಂಗಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಸೋಫಿಟೆಲ್ ಹೋಟೆಲ್ಗೆ ಭೇಟಿ ನೀಡಿ ಶಾಸಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಇನ್ನು ಹೋಟೆಲ್ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಇನ್ನು 13 ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ಮಂಗಳವಾರ ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ, ಇದೀಗ ಸಚಿವ ಡಿಕೆಶಿಯವರ ಮುಂಬೈ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಆದರೆ, ಸರಕಾರ ಉಳಿಸಲು ಡಿಕೆಶಿ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಸದ್ಯದ ಕುತೂಹಲ.