ಬೆಂಗಳೂರು, ಜು 08 (DaijiworldNews/SM): ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ರೋಷನ್ ಬೇಗ್ ಇದೀಗ ಒಂದೆರಡು ತಿಂಗಳ ಬಳಿಕ ಬಿಜೆಪಿ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಕೂಡ ಒಂದು ರಾಜಕೀಯ ಪಕ್ಷ. ನಾನು ಬಿಜೆಪಿ ಪಕ್ಷ ಸೇರಿದರೆ ತಪ್ಪೇನು ಎಂದು ರೋಷನ್ ಬೇಗ್ ಪ್ರಶ್ನಿಸಿದ್ದಾರೆ.
'ನನ್ನನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ತೀವ್ರವಾಗಿ ನೋವನ್ನುಂಟು ಮಾಡಿದೆ. ಪಕ್ಷದ ವಿರುದ್ಧ ಮಾತನಾಡಿದ್ದಕ್ಕೆ, ಸತ್ಯವನ್ನು ಹೇಳಿದಕ್ಕೆ ನನ್ನನ್ನು ಪಕ್ಷದಿಂದ ಅಮಾನತುಗೊಳಿಸಿದ್ದಾರೆ. ರಾಜ್ಯದಲ್ಲಿ ಪಕ್ಷಕ್ಕೆ ನಾಯಕತ್ವವಿಲ್ಲ, ಅದು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ನಾನು ಬೆಂಗಳೂರಿನಲ್ಲೇ ಇರುತ್ತೇನೆ. ಆದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದಿರುವ ರೋಷನ್ ಬೇಗ್ ಅವರ ಹೇಳಿಕೆ ಸದ್ಯ ಕುತೂಹಲ ಮೂಡಿಸಿದೆ.