ಬೆಂಗಳೂರು, ಜು09(Daijiworld News/SS): ಮಧ್ಯಂತರ ಚುನಾವಣೆ ಮಾಡಿ ಮತ್ತೊಮ್ಮೆ ಸರಕಾರದ ಹಣವನ್ನು ಪೋಲು ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸಭೆ ಕಾಲಾವಧಿ ಇನ್ನೂ ನಾಲ್ಕು ವರ್ಷ ಇದೆ. ಇಂಥ ಸಮಯದಲ್ಲಿ ಮಧ್ಯಂತರ ಚುನಾವಣೆಗೆ ಹೋಗುವುದಿಲ್ಲ. ಆ ಮೂಲಕ ಸರಕಾರದ ಹಣವನ್ನು ಪೋಲು ಮಾಡುವುದಿಲ್ಲ. ಮಧ್ಯಂತರ ಚುನಾವಣೆ ಮಾಡದೆ ನಾವು ಸರಕಾರ ರಚನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ಮೇಲೆ ಸಮ್ಮಿಶ್ರ ಸರ್ಕಾರ ಉರುಳಿಸಲು ಯತ್ನ ನಡೆಸುತ್ತಿದ್ದೇವೆ ಎಂಬ ಆರೋಪವಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಇದೇ ಸಮಯದಲ್ಲಿ ಅವರು ಹೇಳಿದ್ದಾರೆ.
ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ - ಜೆಡಿಎಸ್ ನಾಯಕರು ರಿವರ್ಸ್ ಆಪರೇಷನ್ ಸೇರಿದಂತೆ ಎಲ್ಲಾ ರೀತಿಯ ತಂತ್ರಗಾರಿಕೆ ಬಳಸಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಅಳಿವೋ ಉಳಿವೋ ಎಂಬುದು ಇಂದು ಬಹುತೇಕ ಖಾತ್ರಿ ಆಗಲಿದೆ.