ಬೆಂಗಳೂರು, ಜು 09 (Daijiworld News/MSP): ಮೈತ್ರಿ ಸರ್ಕಾರ ಉರುಳುತ್ತಾ ಅಥವಾ ಉಳಿಯುತ್ತಾ ಎನ್ನುವ ಸಂಗತಿ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಹೇಗಾದರೂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂದು ದೋಸ್ತಿ ಪಕ್ಷದ ನಾಯಕರು ಮೂರು ದಿನಗಳಿಂದ ತಮ್ಮ ಬತ್ತಳಿಕೆಯಲ್ಲಿರುವ ಬಾಣಗಳನ್ನು ಪ್ರಯೋಗಿಸುತ್ತಿದ್ದಾರೆ. ಈ ನಡುವೆ ಜೆಡಿಎಸ್ ಪಕ್ಷ ಸೋಮವಾರ ಸಭೆ ನಡೆಸಿ, ತಮ್ಮ ಶಾಸಕರನ್ನು ರೆಸಾರ್ಟ್ಗೆ ಸ್ಥಳಾಂತರ ಮಾಡಿದೆ. ಇನ್ನು ಕಾಂಗ್ರೆಸ್ ಮಂಗಳವಾರ ಶಾಸಕಾಂಗ ಸಭೆ ನಡೆಸುತ್ತಿದ್ದು, ಮತ್ತಷ್ಟು ಅತೃಪ್ತ ಶಾಸಕರು ಸಭೆಗೆ ಗೈರಾಗುವ ಮೂಲಕ ಮುಖಂಡರಿಗೆ ಶಾಕ್ ನೀಡಿದ್ದಾರೆ.
ಶಾಸಕಾಂಗದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಕೂಡ ಉಪಸ್ಥಿತರಿದ್ದಾರೆ. ಆದರೆ, ಈ ಸಭೆಗೆ ಇನ್ನು ಹಲವು ಶಾಸಕರು ಗೈರಾಗುವ ಮೂಲಕ ಮತ್ತಷ್ಟು ಆತಂಕ ಸೃಷ್ಟಿಸಿದ್ದಾರೆ.
ಈಗಾಗಲೇ ರಾಜೀನಾಮೆ ಸಲ್ಲಿಸಿರುವ ಶಾಸಕರಾದ ರಾಮಲಿಂಗಾ ರೆಡ್ಡಿ , ಆನಂದ್ ಸಿಂಗ್ , ಎಸ್.ಟಿ ಸೋಮಶೇಖರ್ , ಭೈರತಿ ಬಸವರಾಜ್ , ಮುನಿರತ್ನ, ಪ್ರತಾಪ್ ಗೌಡ ಪಾಟೀಲ್ , ಬಿ.ಸಿ ಪಾಟೀಲ್ , ರಮೇಶ್ ಜಾರಕಿಹೊಳಿ, ಶಿವರಾಮ್ ಹೆಬ್ಬಾರ್ , ಮಹೇಶ್ ಕುಮಟಳ್ಳಿಗೈರು ಹಾಜರಾಗಿದ್ದು, ಇವರಲ್ಲದೆ ಅನುಮತಿ ಪಡೆಯದೆ ಶಾಸಕ ಎಂಟಿಬಿ ನಾಗರಾಜ್ , ಅಂಜಲಿ ಲಿಂಬಾಳ್ಕರ್ , ರೋಷನ್ ಬೇಗ್ ಗೈರು ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.