ಬೆಂಗಳೂರು, ಜು09(Daijiworld News/SS): ಶಾಸಕರ ರಾಜೀನಾಮೆಯಿಂದ ನಾನಾಗಲಿ, ಕಾಂಗ್ರೆಸ್ ಆಗಲಿ ಭಯಪಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಸೇಫಾಗಿದೆ. ಅತೃಪ್ತ ಶಾಸಕರ ಜತೆ ಮಾತನಾಡಿದ್ದೇನೆ. ಇಂದು ಬೆಳಗ್ಗೆಯೂ ಮಾತನಾಡಿದ್ದೇನೆ. ಅವರ ಬೇಡಿಕೆಗಳನ್ನು ನನ್ನ ಬಳಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರಕ್ಕೆ ಏನೂ ಆಗೋದಿಲ್ಲ. ಎಲ್ಲ ಸಮಸ್ಯೆಗಳನ್ನು ಸಿಎಲ್ಪಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸ್ಪೀಕರ್ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಶಾಸಕರ ರಾಜೀನಾಮೆಯಿಂದ ಕಾಂಗ್ರೆಸ್ ಭಯಪಡುವುದಿಲ್ಲ, ನಾನು ಭಯಪಡಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ. ಈ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಹೇಳಿದರು.
ಯಡಿಯೂರಪ್ಪ ನಮಗೂ ರಾಜೀನಾಮೆಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಆದರೆ ರಾಜನಾಥ್ ಸಿಂಗ್ ಹೇಳಿಕೆ ನೋಡಿದರೆ ಬಿಜೆಪಿಯೇ ಇದಕ್ಕೆಲ್ಲಾ ಬೆಂಬಲ ನೀಡುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಬಿಎಸ್ವೈ ಸಹಾಯಕನೇ ಖುದ್ದು ಶಾಸಕರನ್ನ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾವು ಏನು ಹೇಳಬೇಕು ಎಂದು ಪ್ರಶ್ನಿಸಿದರು.