ಬೆಂಗಳೂರು, ಜು 09 (Daijiworld News/MSP): ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಬಿಸಿ ಮುಟ್ಟಿಸಿದ್ದಾರೆ.
ಈಗಾಗಲೇ ಅತೃಪ್ತ ಶಾಸಕರು ನೀಡಿರುವ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ತುರ್ತಾಗಿ ಅಂಗೀಕರಿಸಲು ಮಾಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದು, "ನಾನು ತೆಗೆದುಕೊಳ್ಳುವ ನಿರ್ಧಾರ ರಾಜಕೀಯ ಹಿನ್ನಲೆಯಲ್ಲಿ ಐತಿಹಾಸಿಕವಾಗಲಿದೆ " ಎಂದು ಸ್ಪೀಕರ್ ರಮೇಶ್ ಕುಮಾರ್ ಖಡಕ್ ಸಂದೇಶ ರವಾನಿಸಿದ್ದಾರೆ.
ನಿಯಮದಂತೆ ಸ್ಪೀಕರ್ ಅವರನ್ನು ಶಾಸಕರು ನೇರವಾಗಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಬೇಕು, ಆ ಬಳಿಕ ರಾಜೀನಾಮೆಯನ್ನು ಅಂಗೀಕರಿಸಬೇಕೋ ಅಥವಾ ಕ್ರಮ ತೆಗೆದುಕೊಳ್ಳಬೇಕೋ ಎನ್ನುವುದನ್ನು ನಿರ್ಧರಿಸಲಿದ್ದೇನೆ ಹಾಗೂ ಪ್ರತಿಯೊಬ್ಬ ಅತೃಪ್ತ ಶಾಸಕರನ್ನು ಕರೆದು ಮಾತನಾಡಿ ಚರ್ಚಿಸಲಿದ್ದೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ರಾಜೀನಾಮೆಯ ವಿಚಾರವಾಗಿ ಶೀಘ್ರವಾಗಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ರಾಜ್ಯದ ಜನತೆಯ ಹಿತಾಸಕ್ತಿಗಾಗಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಎಲ್ಲವನ್ನು ಪರಿಶೀಲಿಸಿ ಚರ್ಚೆ ನಡೆಸುತ್ತೇನೆ ಎಂದಿದ್ದಾರೆ.
ಇನ್ನೊಂದೆಡೆ ಅತೃಪ್ತ ಶಾಸಕರು, ನಾವೆಲ್ಲಾ ಸ್ಪೀಕರ್ ನಿರ್ಧಾರಕ್ಕೆ ಬದ್ದರಾಗಿದ್ದು, ಸ್ಪೀಕರ್ ಮೇಲೆ ನಮಗೆ ಅಪಾರ ಗೌರವವಿದೆ. ಅವರು ಕರೆದ ತಕ್ಷಣ ವಿಚಾರಣೆಗೆ ಹೋಗುತ್ತೇವೆ ಎಂದು ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ.