ಬೆಂಗಳೂರು, ಜು09(Daijiworld News/SS): ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿ ಮೈತ್ರಿಯನ್ನು ಮುರಿಯಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರನೇ ಬಾರಿ ಬಿಜೆಪಿ ನಮ್ಮ ಶಾಸಕರನ್ನು ಸೆಳೆಯಲು ಮುಂದಾಗಿದೆ. ಈ ಎಲ್ಲದರ ಹಿಂದೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಸ್ತಕ್ಷೇಪವಿದೆ. ರಾಜೀನಾಮೆ ನೀಡಿರುವ ಎಲ್ಲ ಶಾಸಕರು ಬಿಜೆಪಿಯ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು.
ಅತೃಪ್ತ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಅವರಿಗೆ ಮನವಿ ಮಾಡಲಾಗುವುದು. ಒಂದು ಪಕ್ಷದ ಚಿಹ್ನೆಯಿಂದ ಗೆದ್ದ ಜನಪ್ರತಿನಿಧಿ ಸ್ವಇಚ್ಛೆಯಿಂದ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಹೀಗಾಗಿ ಸ್ವೀಕರ್ ಅವರಿಗೆ ಶಾಸಕರನ್ನು ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸಬೇಕೆಂದು ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಬಿಜೆಪಿಯ ಚಕ್ರವ್ಯೂಹದಲ್ಲಿ ನಮ್ಮ ಕೆಲ ಶಾಸಕರು ಸಿಲುಕಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಶಾಸಕರ ಹೊರತಾಗಿ ಎಲ್ಲರೂ ಶಾಸಕಾಂಗ ಸಭೆಯಲ್ಲಿ ಭಾಗಿಯಾಗಿದ್ದರು. ಅತೃಪ್ತರೆಲ್ಲರೂ ರಾಜೀನಾಮೆ ಹಿಂಪಡೆದು ವಾಪಸ್ ಬನ್ನಿ ಅಂತಾ ಹೇಳುತ್ತಿದ್ದೇನೆ ಎಂದು ಮನವಿ ಮಾಡಿದರು.
ಇದೇ ವೇಳೆ ಬಿಜೆಪಿ ಅಪರೇಷನ್ ಕಮಲದ ವಿರುದ್ಧ ಗಾಂಧಿ ಪ್ರತಿಮೆ ಬಳಿ ಒಂದು ಗಂಟೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.