ಬೆಂಗಳೂರು, ಜು09(Daijiworld News/SS): ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ತಂತ್ರ ಹೆಣೆದಿರುವ ಆರೋಪ ಹೊರಿಸಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಚಿವೆ ಜಯಮಾಲಾ ಸೇರಿ ಹಲವಾರು ಮುಖಂಡರು ಪ್ರತಿಭಟನೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ರಾಜಕೀಯ ಅತಂತ್ರಸ್ಥಿತಿಯನ್ನು ವಿರೋಧಿಸಿ ಕಾಂಗ್ರೆಸ್ ನವದೆಹಲಿಯಲ್ಲಿಯೂ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದೆ. ಇದರ ಮೂಲಕ ದೇಶದ ಜನರ ಗಮನ ಸೆಳೆಯುವ ಯತ್ನವನ್ನು ಕೈ ಪಕ್ಷ ಮಾಡುತ್ತಿದೆ.
ರಾಜ್ಯದ ರಾಯಚೂರು, ಕಲಬುರ್ಗಿ ಸೇರಿ ಹಲವು ಕಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರೆ ಇತ್ತ ಬೆಂಗಳೂರಿನ ರಾಜಭವನದ ಎದುರು ಸಹ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ರಾಜ್ಯ ಮೈತ್ರಿ ಸರ್ಕಾರದಲ್ಲಿ ಶಾಸಕರು ರಾಜೀನಾಮೆ ಸಲ್ಲಿಸಿರುವುದರಿಂದ ಸರ್ಕಾರದ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಆದರೆ ಈ ನಡುವೆಯೂ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸದ್ಯ ಉಂಟಾಗಿರುವ ಬಿಕ್ಕಟ್ಟು ಶಮನವಾಗಲಿದ್ದು ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಇಂದು ಕೂಡ ಹೇಳಿಕೆ ನೀಡುತ್ತಿದ್ದಾರೆ. ಎರಡೂ ಪಕ್ಷಗಳ ಸಚಿವರು ರಾಜೀನಾಮೆ ನೀಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಚಿವ ಸಂಪುಟ ಮರು ರಚಿಸಲು ಮುಕ್ತ ಅವಕಾಶ ನೀಡಿ ಅತೃಪ್ತ ಶಾಸಕರಿಗೆ ಅವಕಾಶ ನೀಡಲು ಹಾದಿ ಮಾಡಿಕೊಟ್ಟಿದ್ದಾರೆ. ಸ್ಪೀಕರ್ ಸಚಿವರುಗಳ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ.