ಬೆಂಗಳೂರು, ಜು 09 (Daijiworld News/MSP): ಮೈತ್ರಿ ಸರ್ಕಾರದ ವಿರುದ್ಧ ರಾಜೀನಾಮೆ ಅಸ್ತ್ರ ಪ್ರಯೋಗಿಸಿ ಮುಂಬೈಗೆ ಶಿಫ್ಟ್ ಆಗಿರುವ 8 ಅತೃಪ್ತ ಶಾಸಕರ ರಾಜೀನಾಮೆ ಪತ್ರ ಸಮರ್ಪಕವಾಗಿಲ್ಲ ಎಂದು ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ತಿಳಿಸಿದ್ದಾರೆ.
ರಾಜೀನಾಮೆ ಸಲ್ಲಿಸಿದ ಶಾಸಕರ ಪೈಕಿ ಆನಂದ್ ಸಿಂಗ್, ರಾಮಲಿಂಗಾರೆಡ್ಡಿ, ಕೆ. ಸಿ. ನಾರಾಯಣಗೌಡ, ಪ್ರತಾಪ್ ಗೌಡ ಮತ್ತು ಕೆ. ಗೋಪಾಲಯ್ಯ ಸಲ್ಲಿಸಿರುವ ರಾಜೀನಾಮೆ ಪತ್ರಗಳು ಸರಿಯಾಗಿದ್ದು ಕ್ರಮ ಬದ್ದವಾಗಿದೆ. ಉಳಿದವರು ವಿಚಾರಣೆಗೆ ಹಾಜರಾಗಲಿ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.
ರಾಜೀನಾಮೆ ಸಲ್ಲಿಸುವ ಸಂದರ್ಭ ನನ್ನನ್ನು ಖುದ್ದು ಯಾರೂ ಕೂಡಾ ಭೇಟಿಯಾಗಿಲ್ಲ ಹಾಗೂ ಸಹಿ ಹಾಕಿಲ್ಲ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನನಗೆ ಅವರು ಪತ್ರ ಬರೆದು ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಜುಲೈ 12 ರಂದು ಆನಂದ್ ಸಿಂಗ್, ಕೆ. ಗೋಪಾಲಯ್ಯ, ಮತ್ತು ಕೆಸಿ ನಾರಾಯಣಗೌಡ, ಜುಲೈ 15 ರಂದು ರಾಮಲಿಂಗಾರೆಡ್ಡಿ ಹಾಗೂ ಪ್ರತಾಪ್ ಗೌಡ ಇವರನ್ನುವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇದರೊಂದಿಗೆ ರೋಶನ್ ಬೇಗ್ ಅವರ ರಾಜೀನಾಮೆ ಪತ್ರವನ್ನು ಸಚಿವಾಲಯದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷ ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಬೇಡಿಕೆ ಸಲ್ಲಿಸಿದೆ. ಉಳಿದ 8 ಜನರ ರಾಜೀನಾಮೆ ಕ್ರಮಬದ್ಧ ರೀತಿಯಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ. ಎಲ್ಲವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.