ಬೆಂಗಳೂರು, ಡಿ. 09 (DaijiworldNews/ TA): “ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ” ಎಂಬ ಮಾತಿದೆ. ಈ ನಂಬಿಕೆಯಂತೆ ಅನೇಕ ಪ್ರೇಮಹಕ್ಕಿಗಳು ತಮ್ಮ ಇಚ್ಛೆಯ ಸಂಗಾತಿಯನ್ನು ಆರಿಸಿ ವಿವಾಹವಾಗುತ್ತಾರೆ. ಆದರೆ ನಗರದ ಹಳೆಯ ಹಾಗೂ ಪ್ರಸಿದ್ಧ ಪಾರಂಪರಿಕ ದೇವಸ್ಥಾನವೊಂದಾದ ಹಲಸೂರು ಸೋಮೇಶ್ವರ ಸ್ವಾಮಿ ದೇವಸ್ಥಾನ ತನ್ನ ಆವರಣದಲ್ಲಿ ಮದುವೆ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ನಿಷೇಧಕ್ಕೆ ಕಾರಣವೂ ಅಚ್ಚರಿ ತಂದಿದೆ.

ಈ ವಿಚಾರವು ವ್ಯಕ್ತಿಯೊಬ್ಬರು ತಮ್ಮ ಮದುವೆ ನೆರವೇರಿಸಲು ದೇವಸ್ಥಾನ ನಿರಾಕರಿಸಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ ನಂತರ ಮುನ್ನಲೆಗೆ ಬಂದಿದೆ. CMO ವಿವರಣೆ ಕೇಳಿದಾಗ, ದೇವಸ್ಥಾನದ ಅರ್ಚಕರು ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. ಶತಮಾನಗಳ ಇತಿಹಾಸ ಹೊಂದಿರುವ ಈ ದೇವಾಲಯವು ದಶಕಗಳಿಂದ ಮದುವೆಗಳಿಗೆ ಜನಪ್ರಿಯ ಸ್ಥಳವಾಗಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ಈ ಆವರಣದಲ್ಲಿ ಮದುವೆಯಾದ ಜೋಡಿಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಗಳು ಪುರೋಹಿತರನ್ನು ಸಾಕ್ಷಿಗಳಾಗಿ ಹಾಜರಾಗುವಂತೆ ನಿರ್ದೇಶಿಸುತ್ತಿದ್ದವು. ಇದರಿಂದ ದೇವಸ್ಥಾನದ ಕಾರ್ಯಾಚರಣೆಗೆ ತೊಂದರೆ ಉಂಟಾಗುತ್ತಿತ್ತು ಎಂದು ಆಡಳಿತ ಮಂಡಳಿ ತಿಳಿಸಿದೆ.
ದೇವಾಲಯ ಸಮಿತಿಯ ಮುಖ್ಯ ಆಡಳಿತಾಧಿಕಾರಿ ವಿ. ಗೋವಿಂದರಾಜು ನೀಡಿದ ಮಾಹಿತಿಯಲ್ಲಿ, “ಅನೇಕ ಜೋಡಿಗಳು ಮನೆಬಿಟ್ಟು ಓಡಿ ಬಂದು ನಕಲಿ ದಾಖಲೆಗಳ ಆಧಾರದ ಮೇಲೆ ಮದುವೆಯಾಗುತ್ತಾರೆ. ನಂತರ ಅವರ ಪೋಷಕರು ನ್ಯಾಯಾಲಯಕ್ಕೆ ದೂರು ನೀಡುವ ಸಂದರ್ಭಗಳು ಹೆಚ್ಚಾಗಿವೆ” ಎಂದು ತಿಳಿಸಿದ್ದಾರೆ. “ಇಂತಹ ಪ್ರಕರಣಗಳು ದೇವಸ್ಥಾನದ ಪ್ರತಿಷ್ಠೆಗೆ ಧಕ್ಕೆ ತರುತ್ತಿವೆ. ಅಹಿತಕರ ಘಟನೆಗಳನ್ನು ತಪ್ಪಿಸಲು ಸುಮಾರು ಆರು–ಏಳು ವರ್ಷಗಳ ಹಿಂದೆ ಮದುವೆಗಳನ್ನೇ ನಿಲ್ಲಿಸಿದ್ದೇವೆ” ಎಂದಿದ್ದಾರೆ.
ಕಳೆದ ಹಲವು ವರ್ಷಗಳಲ್ಲಿ ದೇವಾಲಯವು ಸುಮಾರು 100–150 ಮದುವೆಗಳನ್ನು ನಡೆಸಿದ್ದು, ನಂತರ ಈ ಸೇವೆಯನ್ನು ಪೂರ್ಣವಾಗಿ ನಿಷೇಧಿಸಿದೆ. ದೇವಸ್ಥಾನವು ಇತರ ಧಾರ್ಮಿಕ ಸೇವೆಗಳು, ಪೂಜೆ–ಪರ್ಯಾಯಗಳು ಮತ್ತು ಆಚರಣೆಗಳನ್ನು ಮುಂದುವರಿಸುತ್ತಿದ್ದರೂ, ವಿವಾಹ ಸಮಾರಂಭಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ. ಭವಿಷ್ಯದಲ್ಲಿ ಈ ನಿರ್ಧಾರವನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ ಆದರೆ ಪ್ರಸ್ತುತ ಮದುವೆಗಳು ಸಂಪೂರ್ಣವಾಗಿ ನಿಷೇಧದಲ್ಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.