ಬೆಂಗಳೂರು, ಡಿ. 09 (DaijiworldNews/ TA): ಕರ್ನಾಟಕದ ತೊಗರಿ ಬೆಳೆಗಾರರು ಎದುರಿಸುತ್ತಿರುವ ಗಂಭೀರ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾವನಾತ್ಮಕ ಪತ್ರ ಬರೆದು ತುರ್ತು ಕ್ರಮಕ್ಕೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಈ ಬಾರಿ ದಾಖಲೆಯ ಮಟ್ಟದಲ್ಲಿ ತೊಗರಿ ಉತ್ಪಾದನೆ ಕಂಡುಬಂದಿದೆ. 16.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ತೊಗರಿಯಿಂದ 12.60 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತಾ ರೂ. 4,800-ರೂ.5,200 ರಷ್ಟಕ್ಕೆ ಇಳಿದಿದೆ. ಉತ್ಪಾದನಾ ವೆಚ್ಚವೇ ರೂ.6,000-ರೂ.6,500 ಆಗಿರುವುದರಿಂದ ರೈತರು ಪ್ರತಿ ಕ್ವಿಂಟಲ್ಗೆ ರೂ. 1,500- ರೂ.2,000 ನಷ್ಟ ಅನುಭವಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೊಗರಿಯೇ ಮುಖ್ಯ ಬೆಳೆ ಎಂದು ಉಲ್ಲೇಖಿಸಿದ್ದಾರೆ. ಸಾಲ ತೀರಿಸುವುದು, ಮಕ್ಕಳ ಶಿಕ್ಷಣ ಹಾಗೂ ಮನೆ ಖರ್ಚಿಗೆ ಕೃಷಿಕರು ತೊಗರಿ ಮಾರಾಟದ ಮೇಲೆಯೇ ನಂಬಿಕೆ ಇಟ್ಟಿದ್ದಾರೆ. ಆದರೆ ಬೆಲೆ ಕುಸಿತದಿಂದ ರೈತರು ಸಾಲದ ಬಾಧೆಗೂ, ಕೆಲವು ಕಡೆ ಆತ್ಮಹತ್ಯೆಗಳಿಗೂ ಆಹುತಿಯಾಗುವ ಆತಂಕ ವ್ಯಕ್ತವಾಗಿದೆ.
ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಪ್ರಧಾನಿ ಮೋದಿಗೆ ನಾಲ್ಕು ಪ್ರಮುಖ ಮನವಿಗಳನ್ನು ಮಾಡಿದ್ದಾರೆ. “ಕರ್ನಾಟಕದ ರೈತರು ದೇಶಕ್ಕೆ ಆಹಾರ ಭದ್ರತೆ ನೀಡುವವರು. ಇಂದಿಲ್ಲಿ ಅವರು ಬೀದಿಗೆ ಬೀಳುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಬೇಕು. ರೈತರ ಕಣ್ಣೀರಿಗೆ ಕೇಂದ್ರವೇ ಜವಾಬ್ದಾರಿಯಾಗುತ್ತದೆ,” ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ರೈತ ಸಂಘಟನೆಗಳ ಆಕ್ರೋಶ, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಆಂದೋಲನ : ಕರ್ನಾಟಕ ರಾಜ್ಯ ರೈತ ಸಂಘದ ನಾಯಕರು ಸರ್ಕಾರದ ನಿರ್ಲಕ್ಷ್ಯವನ್ನು ಗಂಭೀರವಾಗಿ ಟೀಕಿಸಿದ್ದಾರೆ. ತೊಗರಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕಲಬುರಗಿ ಮತ್ತು ರಾಯಚೂರಿನಲ್ಲಿ ಈಗಾಗಲೇ 8-10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. “ಕೇಂದ್ರ ಸರ್ಕಾರ ಈಗಲೇ ಹಸ್ತಕ್ಷೇಪ ಮಾಡದಿದ್ದರೆ ರಾಜ್ಯದ ರೈತರ ಆಂದೋಲನ ತೀವ್ರಗೊಳ್ಳಲಿದೆ” ಎಂದು ರೈತ ನಾಯಕರು ಎಚ್ಚರಿಸಿದ್ದಾರೆ.
ಕರ್ನಾಟಕದ ತೊಗರಿ ಸಂಕಷ್ಟಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರತ್ತ ರಾಜ್ಯದ ರೈತ ಸಮುದಾಯ ಕಾತರದಿಂದ ಎದುರು ನೋಡುತ್ತಿದೆ.