ಹಿಮಾಚಲ ಪ್ರದೇಶ, ಡಿ. 09 (DaijiworldNews/ TA): ಸೋಶಿಯಲ್ ಮೀಡಿಯಾ ಮತ್ತೊಮ್ಮೆ ತನ್ನ ಅದ್ಭುತ ಶಕ್ತಿ ತೋರಿಸಿದೆ. ಬರೋಬ್ಬರಿ 15 ವರ್ಷಗಳಿಂದ ನಾಪತ್ತೆಯಾಗಿದ್ದ ನಿವೃತ್ತ ಯೋಧ ಬಲದೇವ್ ಕುಮಾರ್, ವೈರಲ್ ವೀಡಿಯೋದ ನೆರವಿನಿಂದ ತಮ್ಮ ಕುಟುಂಬದವರಿಗೆ ಮರಳಿ ಸಿಕ್ಕಿರುವ ಘಟನೆ ಹಿಮಾಚಲ ಪ್ರದೇಶದ ಸುಜಾನ್ಪುರ ಜಿಲ್ಲೆಯ ಘರ್ತೊಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

2009ರಲ್ಲಿ ಕೆಲಸದ ಹುಡುಕಾಟದಲ್ಲಿ ಮನೆಯಿಂದ ಹೊರಟ ಬಲದೇವ್ ಕುಮಾರ್, ನಂತರ ಮರಳಿ ಬಾರದೇ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದರೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಪೊಲೀಸರಿಗೂ ದೂರು ನೀಡಿದ್ದರು, ಆದರೆ ಪ್ರತಿಫಲ ಶೂನ್ಯ. ವರ್ಷಗಳು ಕಳೆದಂತೆ ಕುಟುಂಬ ಬಲದೇವ್ ಜೀವಂತವಿಲ್ಲ ಎಂದು ಭಾವಿಸಿತ್ತು. ಆದರೆ, ಒಂದು ವೈರಲ್ ವೀಡಿಯೋ ಅದ್ಭುತವನ್ನೇ ಮಾಡಿದೆ.
ಮೂರು ದಿನಗಳ ಹಿಂದೆ ರಾಜಸ್ಥಾನದ ಬಿಕನೇರ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋದಲ್ಲಿ, ರಸ್ತೆಯ ಬದಿಯಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯ ಚಿತ್ರವನ್ನು ಹಾಕಿ, “ಈ ವ್ಯಕ್ತಿ ಯಾರು?” ಎಂದು ಸ್ಥಳೀಯರು ಸೋಶಿಯಲ್ ಮೀಡಿಯಾದಲ್ಲಿ ಕೇಳಿದ್ದರು. ಈ ವೀಡಿಯೋ ಹಿಮಾಚಲ ಪ್ರದೇಶದ ಸಪ್ನಾ ಕುಮಾರಿ ಎಂಬ ಮಹಿಳೆಗೆ ತಲುಪಿದ್ದು, ಅವರು ಅದನ್ನು ಸ್ಥಳೀಯ ಗುಂಪುಗಳಲ್ಲಿ ಹಂಚಿಕೊಂಡಿದ್ದರು. ಅದೇ ವೇಳೆ ಬಲದೇವ್ ಕುಮಾರ್ ಅವರ ಕುಟುಂಬ ವೀಡಿಯೋವನ್ನು ನೋಡಿ ಬೆಚ್ಚಿಬಿದ್ದಿದೆ. 15 ವರ್ಷಗಳ ನಂತರ ತಮ್ಮ ಕಣ್ಮುಂದೆ ಮಗನನ್ನು ಜೀವಂತವಾಗಿ ನೋಡಿದ ಕ್ಷಣ ಅವರನ್ನು ಭಾವುಕರನ್ನಾಗಿಸಿದೆ.
ಕುಟುಂಬಸ್ಥರು ತಡಮಾಡದೆ ಬಿಕನೇರ್ಗೆ ತೆರಳಿ ಬಲದೇವ್ ಅವರನ್ನು ಕರೆದುಕೊಂಡು ಬಂದಿದ್ದಾರೆ. ಹಲವು ವರ್ಷಗಳ ಹುಡುಕಾಟದ ನಂತರ ಮನೆಗೆ ಮರಳಿದ ಬಲದೇವ್ ಅವರನ್ನು ಗ್ರಾಮಸ್ಥರು ಬ್ಯಾಂಡ್ ಬಾಜಾದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದ್ದು, ಗ್ರಾಮವಿಡೀ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಬಲದೇವ್ ಅವರಿಗೆ ಆಶ್ರಯ ನೀಡಿದ ಗೌರವ್ ಜೈನ್ ಮತ್ತು ಕುಟುಂಬ, ಹಾಗೂ ವೀಡಿಯೋ ಹಂಚಿದ ಸಪ್ನಾ ಕುಮಾರಿ ಅವರಿಗೆ ಬಲದೇವ್ ಕುಟುಂಬ ಕೃತಜ್ಞತೆ ಸಲ್ಲಿಸಿದೆ.