ನವದೆಹಲಿ,ಡಿ. 09 (DaijiworldNews/ TA): ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋಗೆ ಸಂಬಂಧಿಸಿದ ವಿಮಾನ ರದ್ದತಿ ಮತ್ತು ದೀರ್ಘ ವಿಳಂಬದ ಸಂಕಷ್ಟವು ಎಂಟನೇ ದಿನವೂ ಪರಿಹಾರವಾಗದೆ ಮುಂದುವರಿದಿದೆ. ದೇಶದ ಅನೇಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಸಿಲುಕಿಕೊಂಡಿದ್ದು, ಮಕ್ಕಳಿಂದ ವಯೋವೃದ್ಧರ ತನಕ ಸಾವಿರಾರು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರವೂ ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂಡಿಗೋ ನಿರ್ವಹಣೆಯ ಕಾರ್ಯಪದ್ದತಿಯನ್ನೇ ಪ್ರಶ್ನಿಸಿದೆ. ನಿಯಮ ಎಲ್ಲರಿಗೂ ಒಂದೇ ಆದರೆ ಈ ಸಮಸ್ಯೆ ಏಕೆ ಇಂಡಿಗೋಗೆ ಮಾತ್ರ ತಟ್ಟಿದೆ, ಇತರ ವಿಮಾನಯಾನ ಸಂಸ್ಥೆಗಳು ಯಾಕೆ ಸ್ಥಿರವಾಗಿ ಕೆಲಸ ಮಾಡುತ್ತಿವೆ ಎಂಬ ಪ್ರಶ್ನೆ ಜನಮನದಲ್ಲಿ ದೊಡ್ಡ ಚರ್ಚೆಯಾಗಿದೆ.

ಈ ಹಿನ್ನೆಲೆಯಲ್ಲಿ ದೇಶದ ಖ್ಯಾತ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಒಂದು ಚುಟುಕು ವಿಡಿಯೋ ಹಂಚಿಕೊಂಡಿದ್ದು, ಇಂಡಿಗೋ ಎದುರಿಸುತ್ತಿರುವ ಬಿಕ್ಕಟ್ಟಿನ ಮೂಲ ಕಾರಣಗಳನ್ನು ಸ್ಪಷ್ಟವಾಗಿ ವಿವರಿಸಿದೆ. ಕೇಂದ್ರ ಸರ್ಕಾರ ಜಾರಿ ಮಾಡಿದ ಹೊಸ ನಿಯಮವು ಈ ಸಂಪೂರ್ಣ ಬಿಕ್ಕಟ್ಟಿನ ಮೂಲವಾಗಿದೆ. ಹಿಂದೆ ಪೈಲಟ್ಗಳಿಗೆ 36 ಗಂಟೆಗಳ ವಿಶ್ರಾಂತಿ ಅವಧಿ ಬೇಕಾಗಿದ್ದರೆ, ಈಗ ಅದನ್ನು 48 ಗಂಟೆಗಳಿಗೆ ವಿಸ್ತರಿಸಲಾಗಿದೆ. ಈ ಒಂದು ಬದಲಾವಣೆ ಮಾತ್ರವೇ ಪೈಲಟ್ಗಳು ಹಾರಲು ಲಭ್ಯವಿರುವ ಸಮಯವನ್ನು 20 ರಿಂದ 25 ಶೇಕಡಾ ಮಟ್ಟಿಗೆ ಕಡಿಮೆ ಮಾಡಿದೆ. ಪೈಲಟ್ಗಳ ಸಂಖ್ಯೆಯನ್ನು ಹೆಚ್ಚಿಸದೇ ಇದ್ದರೆ, ವಿಮಾನಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಕುಸಿತ ಬರಲೇಬೇಕು. ಇಂಡಿಗೋ ನಿಖರವಾಗಿ ಈ ಸಮಸ್ಯೆಯಲ್ಲೇ ಸಿಲುಕಿದೆ.
ಇಂಡಿಗೋ ಯಾವಾಗಲೂ ಅತ್ಯಂತ ಪರಿಣಾಮಕಾರಿ ಮತ್ತು ನಿಖರವಾಗಿ ಯೋಜಿಸಲಾದ ಕಾರ್ಯವಿಧಾನವನ್ನು ಅನುಸರಿಸುತ್ತಿದ್ದ ಸಂಸ್ಥೆ. ಕಡಿಮೆ ವೆಚ್ಚದ ಏರ್ಲೈನ್ ಮಾದರಿಯಲ್ಲಿ ಕೆಲಸ ಮಾಡುವುದರಿಂದ, ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ಅಥವಾ ಅಧಿಕ ಪೈಲಟ್ಗಳನ್ನು ‘ಬ್ಯಾಕಪ್’ ಆಗಿ ಇಟ್ಟುಕೊಳ್ಳುವ ಅವಕಾಶವಿಲ್ಲ. ಇದಕ್ಕೆ ವಿರುದ್ಧವಾಗಿ ಏರ್ ಇಂಡಿಯಾ ಸೇರಿದಂತೆ ಕೆಲವು ಸಂಸ್ಥೆಗಳ ವಿಮಾನಗಳು ಅವರಿಗೆ ಹೆಚ್ಚುವರಿ ಪೈಲಟ್ಗಳನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಸಮತೋಲನಗೊಳಿಸಲು ಸಾಧ್ಯವಾಗಿದೆ. ಈ ಕಾರಣಕ್ಕಾಗಿ ಇಂಡಿಗೋ ಮಾತ್ರ ದೊಡ್ಡ ಮಟ್ಟದಲ್ಲಿ ಬಿಕ್ಕಟ್ಟಿಗೆ ಒಳಗಾಗಿದ್ದು, ಇತರ ಸಂಸ್ಥೆಗಳು ಅದರಷ್ಟು ಗಂಭೀರ ಪರಿಣಾಮವನ್ನು ಅನುಭವಿಸಿಲ್ಲ.
ಪೈಲಟ್ಗಳನ್ನು ಬೇರೆ ಸಂಸ್ಥೆಗಳಿಂದ ಕರೆತರುವುದೂ ತಕ್ಷಣ ಸಾಧ್ಯವಿಲ್ಲ. ಭಾರತದಲ್ಲಿ ಪೈಲಟ್ಗಳು ಉದ್ಯೋಗ ಬದಲಾಯಿಸಲು ಹಿರಿಯ ಪೈಲಟ್ಗಳಿಗೆ 12 ತಿಂಗಳ ಹಾಗೂ ಸಹ ಪೈಲಟ್ಗಳಿಗೆ ಕನಿಷ್ಠ ಆರು ತಿಂಗಳ ಕಡ್ಡಾಯ ನೋಟಿಸ್ ಅವಧಿ ನೀಡಬೇಕಾಗಿರುವುದರಿಂದ, ತುರ್ತುವಾಗಿ ಸಿಬ್ಬಂದಿಯನ್ನು ಸೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪೈಲಟ್ಗಳ ವಿಶ್ರಾಂತಿ ಅವಧಿ ಹೆಚ್ಚಿರುವುದರಿಂದ ಇಂಡಿಗೋ ಪ್ರತಿದಿನ ನಡೆಸುವ 2,200 ವಿಮಾನಗಳಲ್ಲಿ ಸುಮಾರು 500ಕ್ಕೂ ಹೆಚ್ಚು ವಿಮಾನಗಳು ರದ್ದು ಅಥವಾ ವಿಳಂಬವಾಗುತ್ತಿರುವ ಅಂಕಿ ತಿಳಿದುಬಂದಿದೆ. ವಿಮಾನಯಾನ ಸಂಸ್ಥೆಯ ಮೇಲೆ ಇದು ಬಹಳ ದೊಡ್ಡ ಹೊಡೆತವಾಗಿದ್ದು, ಇದರ ಪರಿಣಾಮ ಪ್ರಯಾಣಿಕರ ಮೇಲೆ ನೇರವಾಗಿ ಬಿದ್ದಿದೆ.
ವಿವಾದವು ದೊಡ್ಡದಾಗುತ್ತಿರುವುದನ್ನು ಗಮನಿಸಿದ ಸರ್ಕಾರ ತಾತ್ಕಾಲಿಕವಾಗಿ ಹೊಸ ನಿಯಮವನ್ನು ಹಿಂತೆಗೆದುಕೊಂಡಿದೆ. ಇದರ ಪರಿಣಾಮ ಮುಂದಿನ ಕೆಲವು ದಿನಗಳಲ್ಲಿ ಪರಿಸ್ಥಿತಿ ನಿಧಾನವಾಗಿ ಸಾಮಾನ್ಯವಾಗುವ ನಿರೀಕ್ಷೆ ಇದೆ. ಆದರೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಬಳಿಕ ಹೊಸ ನಿಯಮವನ್ನು ಮತ್ತೆ ಜಾರಿಗೆ ತರಲಾಗುವುದರಿಂದ ಇಂಡಿಗೋ ಮತ್ತು ಇದಕ್ಕೆ ಸಮಾನವಾದ ಕಾರ್ಯವಿಧಾನ ಹೊಂದಿರುವ ವಿಮಾನಯಾನ ಸಂಸ್ಥೆಗಳು ಪೈಲಟ್ಗಳ ನೇಮಕಾತಿ ಹಾಗೂ ತರಬೇತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಾದ ಅನಿವಾರ್ಯತೆ ಎದುರಿಸಬೇಕಿದೆ.
ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ಈ ಸಂದರ್ಭದಲ್ಲಿ ಇಂಡಿಗೋ ಸಂಸ್ಥೆ ಸಾರ್ವಜನಿಕರಿಗೆ ಕ್ಷಮೆಯಾಚನೆ ಸಲ್ಲಿಸಿದ್ದರೂ, ಬಿಕ್ಕಟ್ಟಿನ ಮೂಲ ಸಮಸ್ಯೆ ಪರಿಹಾರವಾಗುವವರೆಗೆ ಸಂಸ್ಥೆಯ ಮೇಲಿನ ಒತ್ತಡ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.