ನವದೆಹಲಿ, ಡಿ. 09 (DaijiworldNews/AA): ಮತಕಳ್ಳತನಕ್ಕಿಂತ ದೊಡ್ಡ ರಾಷ್ಟ್ರ ವಿರೋಧಿ ಕೃತ್ಯ ಇನ್ನೊಂದಿಲ್ಲ. ಮೋದಿ ಸರ್ಕಾರ ಚುನಾವಣೆಗಳನ್ನು ಕಸಿದುಕೊಳ್ಳುತ್ತಿದೆ ಎಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ಲೋಕಸಭೆಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಚುನಾವಣಾ ಆಯೋಗ, ಸಿಬಿಐ, ಇಡಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಆರ್ಎಸ್ಎಸ್ ಚಿಂತನೆಗಳಿರುವ ಅಧಿಕಾರಿಗಳನ್ನು ಚುನಾವಣಾ ಆಯೋಗದಲ್ಲಿ ತುಂಬಲಾಗಿದೆ. ಸಾಂವಿಧಾನಿಕ ಸಂಸ್ಥೆಯ ಕಬ್ಜ ಮಾಡುವ ಉದ್ದೇಶವೇನು?" ಎಂದು ಪ್ರಶ್ನಿಸಿದರು.
"ಚುನಾವಣಾ ಮಾಹಿತಿ ಕೇಳಿದರೆ 45 ದಿನಗಳಲ್ಲೇ ಡಿಲಿಟ್ ಆಗಿದೆ ಎನ್ನುತ್ತಾರೆ. ನರೇಂದ್ರ ಮೋದಿ ಅವರಿಗೆ ಅನುಕೂಲ ಆಗುವಂತೆ 3-4 ತಿಂಗಳ ಕಾಲ ಪ್ರಚಾರಕ್ಕೆ ವೇಳಾಪಟ್ಟಿ ಮಾಡಲಾಗುತ್ತೆ. ಚುನಾವಣಾ ಸುಧಾರಣೆ ಸರಳ ಮತ್ತು ಸುಲಭ. ಆದರೆ ಸರ್ಕಾರಕ್ಕೆ ಇದನ್ನು ಮಾಡಲು ಮನಸಿಲ್ಲ. ಅದರ ಬದಲಿಗೆ ಕಬ್ಜ ಮಾಡುತ್ತಿದ್ದಾರೆ" ಎಂದು ಹೇಳಿದರು.
"ನಿಯಮಗಳನ್ನು ಬದಲಿಸುವ ಅಧಿಕಾರವನ್ನು ಮುಖ್ಯ ಆಯುಕ್ತರಿಗೆ ಕೊಡಿ. ನಾವು ಅಧಿಕಾರಕ್ಕೆ ಬಂದರೆ ನಾವು ಕಾನೂನು ಬದಲಾವಣೆ ಬದಲಾವಣೆ ಮಾಡುತ್ತೇವೆ. ಚುನಾವಣಾ ಆಯೋಗದ ಆಯುಕ್ತರ ನೇಮಕಾತಿ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಡೆ ಇಟ್ಟಿದ್ದು ಯಾಕೆ? ನಮ್ಮದು ದೊಡ್ಡ ಪ್ರಜಾಪ್ರಭುತ್ವ ಅಲ್ಲ, ಅತ್ಯಾದ್ಭುತ ಪ್ರಜಾಪ್ರಭುತ್ವ. ಮತ ಕಳವು ದೇಶದ್ರೋಹಿ ಚಟುವಟಿಕೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಲಕ್ಷಾಂತರ ನಕಲಿ ಮತದಾರರು ಏಕೆ ಇದ್ದಾರೆ ಎಂದು ಚುನಾವಣಾ ಆಯೋಗ ನನಗೆ ಹೇಳಿಲ್ಲ. ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗದ ಬಳಿ ಉತ್ತರವಿಲ್ಲ. ಬಿಹಾರದಲ್ಲಿ ಎಸ್ಐಆರ್ ನಂತರ, 1.2 ಲಕ್ಷ ನಕಲಿ ಮತದಾರರು ಏಕೆ ಇದ್ದರು? ನೀವು ಸಂಸ್ಥೆಯನ್ನು ವಶಪಡಿಸಿಕೊಂಡಿದ್ದೀರಿ ಎಂಬುದು ಸ್ಪಷ್ಟವಾಗಿದೆ" ಎಂದು ವಾಗ್ದಾಳಿ ನಡೆಸಿದರು.