ಯಾದಗಿರಿ, ಡಿ. 10 (DaijiworldNews/TA): ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ ಅಕ್ರಮ ಪ್ರಕರಣಗಳು ರಾಜ್ಯವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆ, ಈ ವಿಷಯ ವಿಧಾನಪರಿಷತ್ತಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಈ ಹಗರಣದ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಎಲ್ಲಾ ಪ್ರಕರಣಗಳಿಗೂ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಅಗತ್ಯವಿದೆ ಎಂದು ಆಗ್ರಹಿಸಿದರು. ಅವರು ಡಿಸೆಂಬರ್ 8ರಂದು ಕನ್ನಡ ಪ್ರಭೆಯಲ್ಲಿ ಪ್ರಕಟವಾದ ‘ಅನ್ನಭಾಗ್ಯ ಅಕ್ಕಿ ಫಾರಿನ್ ಗೆ’ ವರದಿಯನ್ನು ಪ್ರದರ್ಶಿಸಿ, ಅಕ್ರಮ ದೇಶವ್ಯಾಪಿ ಜಾಲ ರೂಪಿಸಿಕೊಂಡಿದೆ ಎಂದು ಆರೋಪಿಸಿದರು.
ಬಿಪಿಎಲ್ ಕುಟುಂಬಗಳಿಗೆ ನೀಡಲಾಗುವ ಅನ್ನಭಾಗ್ಯ ಅಕ್ಕಿಯನ್ನು ಸಂಗ್ರಹಿಸಿ ಹೊರರಾಜ್ಯ ಮತ್ತು ವಿದೇಶಗಳಿಗೆ ಮಾರಾಟ ಮಾಡುವ ದುರ್ಬಳಕೆಯು ವ್ಯಾಪಕವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖೆಗೆ ಆದೇಶಿಸಿತೇ, ಎಷ್ಟು ಅಕ್ಕಿ ಜಪ್ತಿ ಮಾಡಲಾಗಿದೆ, ಎಷ್ಟು ಪ್ರಕರಣ ದಾಖಲಾಗಿದೆ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಯಿತೇ ಎಂಬ ಪ್ರಶ್ನೆಗಳನ್ನೂ ರವಿಯವರು ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ, 2025–26ರಲ್ಲಿ ಒಟ್ಟು 485 ಪ್ರಕರಣಗಳು ಪತ್ತೆಯಾಗಿದ್ದು, 461 ಎಫ್ಐಆರ್ಗಳು ದಾಖಲಾಗಿವೆ ಎಂದು ಹೇಳಿದರು. 570 ಜನರನ್ನು ಬಂಧಿಸಲಾಗಿದ್ದು, 29,603 ಕ್ವಿಂಟಾಲ್ ಅಕ್ಕಿ ಹಾಗೂ 314 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಯಾದಗಿರಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಕೊಪ್ಪಳದಲ್ಲಿ 330 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ ಎಂದು ಮುನಿಯಪ್ಪ ವಿವರಿಸಿದರು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ. ರವಿ, ಇದು ಸ್ಥಳೀಯ ಮಟ್ಟದಲ್ಲಿ ಮಾತ್ರ ಇರುವ ಪ್ರಕರಣವಲ್ಲ, ರಾಜ್ಯವೇ ವ್ಯಾಪಿಸಿರುವ ದೊಡ್ಡ ಹಗರಣ ಎಂದು ಹೇಳಿದರು. ಅನ್ನಭಾಗ್ಯ ಅಕ್ಕಿಯನ್ನು ಪಾಲಿಶ್ ಮಾಡಿ ಸಿಂಗಾಪುರ, ದುಬೈ ಮೊದಲಾದ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಶಹಾಪುರ ಟಿಎಪಿಸಿಎಂಎಸ್ ಗೋದಾಮಿನಿಂದ 6,000 ಕ್ವಿಂಟಾಲ್ ಅಕ್ಕಿ ನಾಪತ್ತೆಯಾದ ಹಳೆಯ ಪ್ರಕರಣವನ್ನು ಉದಾಹರಣೆಗೆ ನೀಡಿದ ಅವರು, ಅಧಿಕಾರಿಗಳೇ ಅಕ್ರಮದಲ್ಲಿ ಶಾಮೀಲಾಗಿರುವ ಶಂಕೆ ಇದೆ ಎಂದು ಹೇಳಿದರು. “ಬೇಲಿಯೇ ಎದ್ದು ಹೊಲ ಮೇಯುತ್ತಿರುವಂತಾಗಿದೆ” ಎಂದು ವಾಗ್ದಾಳಿ ನಡೆಸಿದರು.
ಅಕ್ರಮ ನಿರ್ಬಂಧಿಸಲು ಕಠಿಣ ಕಾನೂನನ್ನು ತರುವ ಉದ್ದೇಶವಿದೆಯೇ ಎಂದು ಪ್ರಶ್ನಿಸಿದ ರವಿಗೆ ಪ್ರತಿಕ್ರಿಯಿಸಿದ ಮುನಿಯಪ್ಪ, ಜಿಲ್ಲಾಧಿಕಾರಿಗಳಿಗೆ ವ್ಯಾಪಕ ಅಧಿಕಾರವಿದ್ದು, ಅವರ ಮೇಲ್ವಿಚಾರಣೆಯಿಂದಲೇ ಅಕ್ರಮಗಳು ಪತ್ತೆಯಾಗುತ್ತಿವೆ ಎಂದು ಹೇಳಿದರು. ಉತ್ತರ ಕರ್ನಾಟಕದಲ್ಲಿ ಅಕ್ಕಿ ಬಳಕೆ ಕಡಿಮೆ ಇರುವುದರಿಂದ, ಜನವರಿಯಿಂದ ಎಣ್ಣೆ, ಕಾಳು, ಪೌಷ್ಟಿಕ ಆಹಾರಧಾನ್ಯಗಳನ್ನು ಒಳಗೊಂಡ ಇಂದಿರಾ ಕಿಟ್ ವಿತರಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ ಎಂದರು.
ಸದಸ್ಯ ರವಿ, ಅಕ್ರಮಕೋರರ ಆಸ್ತಿ ಮುಟ್ಟಗೋಲು ಹಾಕಬೇಕು, ಭಾಗಿಯಾದ ಅಧಿಕಾರಿಗಳನ್ನು ವಜಾ ಮಾಡಿ, ವಿಶೇಷ ಕಾಯ್ದೆ ತರಬೇಕು ಮತ್ತು ಎಸ್ಐಟಿ ರಚಿಸಲೇಬೇಕು ಎಂದು ಒತ್ತಾಯಿಸಿದರು. ಆದರೆ, ಇದಕ್ಕೆ ಒಪ್ಪದ ಸಚಿವ ಮುನಿಯಪ್ಪ, “ಎಸ್ಐಟಿ ಅಗತ್ಯವಿಲ್ಲ. ಸಿಐಡಿ ತನಿಖೆ ಸಾಕಷ್ಟು ಪರಿಣಾಮಕಾರಿಯಾಗಿದೆ. ಸರ್ಕಾರ ವಿಫಲವಾಗಿಲ್ಲ, ಯಾವುದೇ ಮುಚ್ಚುಮರೆ ಇಲ್ಲ” ಎಂದು ಸ್ಪಷ್ಟಪಡಿಸಿದರು. ಈ ಉತ್ತರಕ್ಕೆ ನಿಗದಿಯಾಗದ ರವಿ, “ಅಕ್ರಮಗಳು ಇಷ್ಟೊಂದು ನಡೆಯುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾಗಿದೆ” ಎಂದು ಹೆಚ್ಚುವರಿ ಟೀಕೆ ವ್ಯಕ್ತಪಡಿಸಿದರು.