ಅಸ್ಸಾಂ, ಡಿ. 10 (DaijiworldNews/TA): ಮಜುಲಿ, ಭಾರತದ ಅಸ್ಸಾಂ ರಾಜ್ಯದಲ್ಲಿರುವ ಬ್ರಹ್ಮಪುತ್ರ ನದಿಯ ನಡುವೆ ಹರಡಿಕೊಂಡಿರುವ ಉದ್ದ ಹಾಗೂ ತೆಳ್ಳಗಿನ ನದಿ ದ್ವೀಪವಾಗಿದೆ. ಪ್ರವಾಹಗಳು, ನದಿ ಮಾರ್ಗಗಳ ಬದಲಾವಣೆ ಮತ್ತು ಭೂರೂಪಶಾಸ್ತ್ರೀಯ ಪರಿವರ್ತನೆಗಳ ಪರಿಣಾಮವಾಗಿ ಶತಮಾನಗಳ ಹಿಂದೆ ಈ ವಿಶಿಷ್ಟ ದ್ವೀಪ ರೂಪುಗೊಂಡಿತು. ದ್ವೀಪದ ಉತ್ತರಕ್ಕೆ ಬ್ರಹ್ಮಪುತ್ರ ಮತ್ತು ದಕ್ಷಿಣಕ್ಕೆ ಬುರ್ಹಿ ದಿಹಿಂಗ್ ನದಿಗಳಿವೆ. 1661ರಿಂದ 1696ರ ನಡುವೆ ಸಂಭವಿಸಿದ ಭೂಕಂಪಗಳ ಸರಣಿ 1750ರಲ್ಲಿ ಭಾರೀ ಪ್ರವಾಹಕ್ಕೆ ಕಾರಣವಾಯಿತು. ಈ ಪ್ರವಾಹ ಬ್ರಹ್ಮಪುತ್ರದ ಹರಿವನ್ನೇ ಬದಲಾಯಿಸಿ ಹೊಸ ಮಾರ್ಗಗಳನ್ನು ಸೃಷ್ಟಿಸಿತು. ಈ ಬದಲಾವಣೆಗಳೇ ಮಜುಲಿ ದ್ವೀಪ ನಿರ್ಮಾಣಕ್ಕೆ ಆಧಾರವಾಯಿತು.

ಪ್ರವಾಹದ ನಂತರ ಬುರ್ಹಿ ದಿಹಿಂಗ್ ನದಿ ತನ್ನ ಸಂಗಮವನ್ನು ಸುಮಾರು 190 ಕಿಲೋಮೀಟರ್ ಪೂರ್ವಕ್ಕೆ ಸರಿಸಿತು. ಅದರ ದಕ್ಷಿಣ ಶಾಖೆ “ಬುರ್ಹಿ ಕ್ಸುಟಿ” ಮತ್ತು ಉತ್ತರ ಶಾಖೆ “ಲುಯಿಟ್ ಕ್ಸುಟಿ” ಎಂದು ಕರೆಯಲ್ಪಟ್ಟವು. ಬಳಿಕ ಲುಯಿಟ್ ಕ್ಸುಟಿ ಕ್ರಮೇಣ ಸಂಕೋಚಗೊಂಡು ‘ಕೆರ್ಕೋಟಾ ಕ್ಸುಟಿ’ ಆಗಿ ಬದಲಾಗಿದರೆ, ಬುರ್ಹಿ ಕ್ಸುಟಿ ಇಂದಿನ ಬ್ರಹ್ಮಪುತ್ರದ ಮುಖ್ಯ ಪ್ರವಾಹವಾಗಿ ವಿಸ್ತರಿಸಿತು. 17ನೇ ಶತಮಾನದಲ್ಲಿ ಅಹೋಮ್ ರಾಜ ಪ್ರತಾಪ್ ಸಿಂಘ ಮಜುಲಿಯಲ್ಲಿ “ಮೇರಾಗಢ್” ಎಂಬ ಕೋಟೆಯನ್ನು ನಿರ್ಮಿಸಿದರು. ರಾಜ ಲಕ್ಷ್ಮಿ ಸಿಂಘ (1769–1780) 1776ರಲ್ಲಿ ಬರೆದ ಅನುದಾನ ಪತ್ರದಲ್ಲೂ ಮಜುಲಿ ಪ್ರದೇಶ, ಕಮಲಾಬರಿ ಸತ್ರ, ಅಗ್ನಿಚಪೋರಿ, ಗಜಲ ಸತ್ರ ಮತ್ತು ಟುನಿ ನದಿಗಳ ಉಲ್ಲೇಖ ಕಂಡುಬರುತ್ತದೆ. ಮೊಮರಿಯಾ ದಂಗೆಯ ಸಮಯದಲ್ಲಿ ದ್ವೀಪದ ಮೇಲಿನ ನಿಯಂತ್ರಣವನ್ನು ದಂಗೆ ನಾಯಕ ಹೊಹಾ ವಹಿಸಿಕೊಂಡಿದ್ದ ಎಂಬುದೂ ಐತಿಹಾಸಿಕ ದಾಖಲೆಗಳಲ್ಲಿ ಉಲ್ಲೇಖವಾಗಿದೆ.
16ನೇ ಶತಮಾನದಲ್ಲಿ ನವ-ವೈಷ್ಣವ ಚಳವಳಿಯ ಸಂಪ್ರೇರಕ, ಸಮಾಜ ಸುಧಾರಕ ಶ್ರೀಮಂತ ಶಂಕರದೇವ್ ಮಜುಲಿಗೆ ಭೇಟಿ ನೀಡಿದರು. ಅವರು ಇಲ್ಲಿ ವೈಷ್ಣವ ಧರ್ಮದ ಪ್ರಚಾರಕ್ಕೆ ಅನೇಕ ಸತ್ರಗಳು (ಮಠಗಳು) ಸ್ಥಾಪಿಸಿದರು. ಈ ಸತ್ರಗಳು ಅಸ್ಸಾಂನ ಧಾರ್ಮಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ಪರಂಪರೆಯ ಕೇಂದ್ರಗಳಾಗಿ ಬೆಳೆದವು. ಇಂದಿಗೂ ಮಜುಲಿ ತನ್ನ ವೈಷ್ಣವ ಸತ್ರಗಳು, ನೃತ್ಯ–ಸಂಗೀತ ಪರಂಪರೆ ಮತ್ತು ತತ್ವಶಿಕ್ಷಣಗಳಿಗಾಗಿ ಪ್ರಸಿದ್ಧ.