ನವದೆಹಲಿ,ಡಿ. 10 (DaijiworldNews/AK): ಬೆಳಕಿನ ಹಬ್ಬ ದೀಪಾವಳಿಯನ್ನು ಇದೀಗ ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.

ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಯುನೆಸ್ಕೋದ ಪ್ರಮುಖ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಕೆಲಸ ಮಾಡುವ ಈ ಅಂತರ್ ಸರ್ಕಾರಿ ಸಮಿತಿಯ ಅಧಿವೇಶನವನ್ನು ಭಾರತ ಇದೇ ಮೊದಲ ಬಾರಿಗೆ ಆಯೋಜಿಸಿದೆ.
ಸಮಿತಿಯ 20ನೇ ಅಧಿವೇಶನವು ಡಿ.8ರಿಂದ ಕೆಂಪುಕೋಟೆಯಲ್ಲಿ ನಡೆಯುತ್ತಿದ್ದು, ಡಿ.13ರವರೆಗೆ ನಡೆಯಲಿದೆ. ದೀಪಾವಳಿ ಹಬ್ಬವನ್ನು ಯುನೆಸ್ಕೋ ಹಬ್ಬಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಘೋಷಣೆ ಮಾಡಲಾಯಿತು. ಭಾರತ ಮೊದಲ ಬಾರಿಗೆ ಈ ಸಮಿತಿಯ ಸಭೆಯನ್ನು ಆಯೋಜಿಸಿದ್ದು, ದೀಪಾವಳಿಯ ಸೇರ್ಪಡೆಯು ದೇಶದ ಸಾಂಸ್ಕೃತಿಕ ಪರಂಪರೆಗೆ ಜಾಗತಿಕ ಮನ್ನಣೆ ನೀಡಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಪ್ರಪಂಚದಾದ್ಯಂತ ಜನರು ಈ ನಿರ್ಧಾರದಿಂದ ಖುಷಿಯಾಗಿದ್ದಾರೆ. ದೀಪಾವಳಿ ನಮ್ಮ ಸಂಸ್ಕೃತಿ ಮತ್ತು ನೀತಿಯೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ. ಇದು ನಮ್ಮ ನಾಗರಿಕತೆಯ ಆತ್ಮ. ಇದು ಬೆಳಕು ಮತ್ತು ಸದಾಚಾರವನ್ನು ಸಂಕೇತಿಸುತ್ತದೆ. ಯುನೆಸ್ಕೋ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ದೀಪಾವಳಿ ಸೇರ್ಪಡೆಯಿಂದಾಗಿ ಈ ಹಬ್ಬದ ಜಾಗತಿಕ ಜನಪ್ರಿಯತೆ ಇನ್ನಷ್ಟು ಹೆಚ್ಚಲಿದೆ . ಪ್ರಭು ಶ್ರೀ ರಾಮನ ಆದರ್ಶಗಳು ನಮಗೆ ಶಾಶ್ವತವಾಗಿ ಮಾರ್ಗದರ್ಶನ ನೀಡಲಿ" ಎಂದು ಪೋಸ್ಟ್ ಮಾಡಿದ್ದಾರೆ.