ಬೆಳಗಾವಿ, ಡಿ. 10 (DaijiworldNews/AA): ವಿಧಾನಸಭೆಯಲ್ಲಿ ಇಂದು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಡಿಸಿದ್ದಾರೆ.

ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ ಹಾಕುವ ವಿಧೇಯಕ ಇದಾಗಿದ್ದು, ದ್ವೇಷ ಭಾಷಣಗಳಿಗೆ ನೋಂದಾಯಿತ ಅಥವಾ ನೋಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ ಎಂದು ವಿಧೇಯಕದಲ್ಲಿ ಕಾನೂನು ತರಲಾಗಿದೆ.
ದ್ವೇಷ ಭಾಷಣ ನಿಯಂತ್ರಣ ವಿಧೇಯಕದಲ್ಲಿರುವ ಅಂಶಗಳು:
ದ್ವೇಷ ಭಾಷಣ ಪ್ರಸರಣೆ, ಪ್ರಕಟಣೆ, ಪ್ರಚಾರ ತಡೆಯಲು ವಿಧೇಯಕ.
* ನಿರ್ದಿಷ್ಟ ವ್ಯಕ್ತಿ, ಸಮೂಹ, ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳ ತಡೆಗೆ ವಿಧೇಯಕ.
* ಮೊದಲ ಬಾರಿಗೆ ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ.
* ಅಪರಾಧ ಪುನರಾವರ್ತನೆ ಆದರೆ ಕನಿಷ್ಠ 2 ವರ್ಷದಿಂದ ಗರಿಷ್ಠ 10 ವರ್ಷದವರೆಗೆ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ.
* ದ್ವೇಷ ಭಾಷಣ ಮಾಡಿ ಕೇಸ್ ಬಿದ್ದರೆ ಅದು ಜಾಮೀನು ರಹಿತ ಪ್ರಕರಣ.
* ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ದ್ವೇಷ ಭಾಷಣಗಳ ವಿಚಾರಣೆ ಮಾಡಬೇಕು.
* ದ್ವೇಷ ಭಾಷಣಗಳ ಪ್ರಕರಣಗಳನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪಪೊಲೀಸ್ ವರಿಷ್ಠಾಧಿಕಾರಿ ದರ್ಜೆಗಿಂತ ಕಡಿಮೆ ಇಲ್ಲದ ಯಾರೇ ಪೊಲೀಸ್ ಅಧಿಕಾರಿಯು ಮಾಹಿತಿ ಸ್ವೀಕರಿಸಿದರೆ ವಿಚಾರಣೆ ಮಾಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು.
* ಈ ಕಾಯ್ದೆಯಡಿ ದ್ವೇಷ ಭಾಷಣಗಳಿಗೆ ನೋಂದಾಯಿತ ಅಥವಾ ನೋಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ.
* ದ್ವೇಷ ಭಾಷಣಗಳ ಕಂಟೆಂಟ್ಗಳನ್ನು ಡೊಮೈನ್ನಿಂದ ಬ್ಲಾಕ್ ಮಾಡುವ ಅಥವಾ ತೆಗೆದು ಹಾಕುವ ಅಧಿಕಾರವೂ ಗೊತ್ತುಪಡಿಸಿದ ಅಧಿಕಾರಿಗಳಿಗೆ ವಿಧೇಯಕ ಕೊಟ್ಟಿದೆ.