ಇಟಾನಗರ, ಡಿ. 11 (DaijiworldNews/AA): ಟ್ರಕ್ವೊಂದು 1,000 ಅಡಿ ಪ್ರಪಾತಕ್ಕೆ ಉರುಳಿ 18 ಕಾರ್ಮಿಕರು ಮೃತಪಟ್ಟ ಘಟನೆ ಅರುಣಾಚಲ ಪ್ರದೇಶದ ಅಂಜಾವ್ನಲ್ಲಿ ಸಂಭವಿಸಿದೆ.

ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ 18 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಾರ್ಮಿಕರನ್ನು ಅರುಣಾಚಲ ಪ್ರದೇಶದ ಹಯುಲಿಯಾಂಗ್-ಚಾಗ್ಲಗಂ ರಸ್ತೆಯ ಬಳಿ ನಿರ್ಮಾಣ ಹಂತದ ಸೈಟ್ ಕೆಲಸಕ್ಕೆ ಟ್ರಕ್ನಲ್ಲಿ ಕರೆದೊಯ್ಯುತ್ತಿದ್ದಾಗ ಈ ದುರಂತ ನಡೆದಿದೆ.
ಡಿ.8ರಂದು ರಾತ್ರಿ ಅಪಘಾತ ಸಂಭವಿಸಿದ್ದು, ಎರಡು ದಿನಗಳ ಕಾಲ ಯಾರಿಗೂ ಮಾಹಿತಿ ಲಭ್ಯವಾಗಿರಲಿಲ್ಲ. ಡಿ.10ರಂದು ರಾತ್ರಿ ಅಪಘಾತದಲ್ಲಿ ಬದುಕುಳಿದ ಓರ್ವ ವ್ಯಕ್ತಿ ಜಿಆರ್ಇಎಫ್ ಶಿಬಿರ ತಲುಪಿದಾಗ ಅರುಣಾಚಲ ಪ್ರದೇಶ ಪೊಲೀಸರು ಮತ್ತು ಪಿಆರ್ಒ ರಕ್ಷಣಾ ಇಲಾಖೆಗೆ ಮಾಹಿತಿ ದೊರೆತಿದೆ. ನಂತರ ಗುರುವಾರ ಬದುಕುಳಿದ ಓರ್ವ ವ್ಯಕ್ತಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಸ್ಪಿಯರ್ ಕಾರ್ಪ್ಸ್, ಭಾರತೀಯ ಸೇನೆ, ಸ್ಥಳೀಯ ಪೊಲೀಸರು, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಜಿಲ್ಲಾ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರು. ಸೇನಾ ಶೋಧನಾ ಕಾಲಮ್ಗಳು, ಜಿಆರ್ಇಎಫ್ ತಂಡಗಳು, ವೈದ್ಯಕೀಯ ಘಟಕಗಳು, ಎನ್ಡಿಆರ್ಎಫ್ ಸಿಬ್ಬಂದಿ, ಸ್ಥಳೀಯ ಪೊಲೀಸರು ಮತ್ತು ಎಡಿಸಿ ಹಯುಲಿಯಾಂಗ್ ಘಟನಾ ಸ್ಥಳದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದರು.
ಘಟನಾ ಸ್ಥಳದಲ್ಲಿ ಟ್ರಕ್ ಹೆಲಿಕಾಪ್ಟರ್ ಸಹಾಯದಿಂದಲೂ ಗೋಚರಿಸುತ್ತಿರಲಿಲ್ಲ. ನಾಲ್ಕು ಗಂಟೆಗಳ ತೀವ್ರ ಶೋಧದ ನಂತರ ರಸ್ತೆಯಿಂದ ಸುಮಾರು 200 ಮೀ. ಕೆಳಗೆ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಟ್ರಕ್ನ ಅವಶೇಷಗಳು ಪತ್ತೆಯಾಗಿದೆ. ಈವರೆಗೂ 18 ಮಂದಿಯ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ.