ಬೆಂಗಳೂರು, ಡಿ. 12 (DaijiworldNews/AA): ಗ್ಯಾರಂಟಿ ಯೋಜನೆ ಅಧ್ಯಕ್ಷ, ಮಾಜಿ ಸಚಿವ ಹೆಚ್ ಎಂ ರೇವಣ್ಣ ಪುತ್ರ ಆರ್. ಶಶಾಂಕ್ ಅವರ ಕಾರು ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿ ನಡೆದಿದೆ.

ಹೆಚ್.ಎಂ ರೇವಣ್ಣ ಪುತ್ರ, ಮೃತ ರಾಜೇಶ್
ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿ ರಾಜೇಶ್ (27) ಅವರು ಬೈಕ್ನಲ್ಲಿ ತೆರಳುತ್ತಿದ್ದಾಗ ರೇವಣ್ಣ ಪುತ್ರ ಶಶಾಂಕ್ ಫಾರ್ಚೂನರ್ ಕಾರು ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ವೇಳೆ ಶಶಾಂಕ್ ಕಾರು ಚಲಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರನ್ನು ಯಾರು ಚಾಲಾಯಿಸುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಗುರುವಾರ ರಾತ್ರಿ 10.30 ರ ಸುಮಾರಿಗೆ ಅಪಘಾತ ಎಸಗಿದ ಬಳಿಕ ಶಶಾಂಕ್ ಕಾರಿನೊಂದಿಗೆ ಪರಾರಿಯಾಗಿದ್ದರು. ಈ ವಿಚಾರ ತಿಳಿದ ಸ್ಥಳೀಯರು 5 ಕಿ.ಮೀ. ಹಿಂಬಾಲಿಸಿ ಸನ್ ಫ್ಲವರ್ ಫ್ಯಾಕ್ಟರಿ ಬಳಿ ಅಡ್ಡಗಟ್ಟಿ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದು ಅವಾಜ್ ಹಾಕಿದ ಬಳಿಕ ಶಶಾಂಕ್, ಕಾರನ್ನು ಬದಿಯಲ್ಲಿ ನಿಲ್ಲಿಸುತ್ತೇನೆ ಎಂದು ಹೇಳಿ ಪರಾರಿಯಾಗಿದ್ದಾರೆ.