ಬೆಂಗಳೂರು, ಡಿ. 12 (DaijiworldNews/AK): ಕರ್ನಾಟಕದ ಪರ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕೆಇಆರ್ ಎಸ್ (ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ) ನಿರ್ದೇಶಕರ ನೇತೃತ್ವದಲ್ಲಿ ತಂಡವನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ತಂಡವು ಉಪ ಮುಖ್ಯ ಇಂಜಿನಿಯರ್ ಹಾಗೂ ಸಿಬ್ಬಂದಿಯನ್ನು ಒಳಗೊಂಡಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕೆಲಸ ನಿರ್ವಹಿಸಲಿದೆ. ರಾಮನಗರದಲ್ಲೇ ಮೇಕೆದಾಟು ಯೋಜನೆ ಕಚೇರಿ ಸ್ಥಾಪಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನ. 18, 2025 ರಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಒಂದು ಮುಖ್ಯ ಇಂಜಿನಿಯರ್ ಕಚೇರಿ ಹಾಗೂ ಒಂದು ಅಧೀಕ್ಷಕ ಇಂಜಿನಿಯರ್ ಕಚೇರಿಯನ್ನು ಆರಂಭಿಸಲು ನಿರ್ಧರಿಸಲಾಗಿತ್ತು.
ಆದರೆ ಹೊಸದಾಗಿ ಕಚೇರಿ ಸ್ಥಾಪನೆ ಹಾಗೂ ಹುದ್ದೆಗಳ ನೇಮಕಕ್ಕೆ ಆರ್ಥಿಕ ಇಲಾಖೆಯ ಅನುಮತಿ ಅಗತ್ಯವಾಗಿದ್ದು, ಇದಕ್ಕೆ ಬಹಳಷ್ಟು ಸಮಯಾವಕಾಶ ಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಈ ಯೋಜನೆ ಜಾರಿಯ ಜವಾಬ್ದಾರಿಯನ್ನು ಕೆಇಆರ್ ಎಸ್ ನಿರ್ದೇಶಕರಿಗೆ ವಹಿಸಿದೆ.
ಕೆಇಆರ್ ಎಸ್ ಸಂಸ್ಥೆ ತನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ನೌಕರರನ್ನು ಒಳಗೊಂಡು ತಂಡವನ್ನು ರಚಿಸಿ ಮೇಕೆದಾಟು ಯೋಜನೆಯ ಜಾರಿಯ ಜವಾಬ್ದಾರಿಯನ್ನು ನೀಡಲಾಗಿದೆ.