ನವದೆಹಲಿ,ಡಿ. 12 (DaijiworldNews/AK): ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚಿಸಿರುವ “ದ್ವೇಷ ಭಾಷಣಕ್ಕೆ ಹತ್ತು ವರ್ಷಗಳ ಜೈಲು ಶಿಕ್ಷೆ” ಈ ಶಾಸನ ಕಾಂಗ್ರೆಸ್ ಪಕ್ಷದ ಕ್ರೂರ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ಹೊರಹಾಕಿದ್ದಾರೆ.

ಈ ಶಾಸನ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತದೆ ಹಾಗೂ ರಾಜಕೀಯ ನಿಯಂತ್ರಣದ ದುರುದ್ದೇಶಕ್ಕಾಗಿ ಜಾರಿಗೆ ತಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈ ಮೂಲಕ ಎಲ್ಲರ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಕ್ರೂರ ಸಂಪ್ರದಾಯವನ್ನು ಪ್ರದರ್ಶಿಸುತ್ತಿದ್ದು, ಸರ್ಕಾರದ ದುರಾಡಳಿತಕ್ಕೆ ಕೈಗನ್ನಡಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ದುರಾಡಳಿತ ವಿರುದ್ಧದ ಧ್ವನಿ ಅಡಗಿಸಲು ಹಾಗೂ ಸಾರ್ವಜನಿಕ ಅಭಿಪ್ರಾಯಗಳಿಗೆ ಕಡಿವಾಣ ಹಾಕಲು ಹೀಗೆ ದ್ವೇಷ ಭಾಷಣಕ್ಕೆ 10 ವರ್ಷಗಳ ಜೈಲು ಶಿಕ್ಷೆ ಎಂಬ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಶಾಸನ ರಚನೆ ಮಾಡಿದೆ ಎಂದು ಖಂಡಿಸಿದ್ದಾರೆ. ಇದು ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ರಚಿಸಿದಂತೆ ಕಾಣುತ್ತಿಲ್ಲ. ಬದಲಾಗಿ ಸರ್ಕಾರದ ದುರಾಡಳಿತ ಪ್ರಶ್ನಿಸುವವರ ಧ್ವನಿ ಅಡಗಿಸುವ ದುರುದ್ದೇಶಪುರಕದಂತೆ ಇದೆ ಎಂದು ಆರೋಪಿಸಿದ್ದಾರೆ.