ನವದೆಹಲಿ,ಡಿ. 12 (DaijiworldNews/AK): 2026ರ ಹಂಗಾಮಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ.

ಮಿಲ್ಲಿಂಗ್ ಕೊಬ್ಬರಿಯ ಬೆಂಬಲ ಬೆಲೆಯನ್ನ ಪ್ರತಿ ಕ್ವಿಂಟಲ್ಗೆ 445 ರೂ. ಹೆಚ್ಚಿಸಿ 12,027 ರೂ. ನಿಗದಿಪಡಿಸಲಾಗಿದೆ. ಉಂಡೆ ಕೊಬ್ಬರಿಯ ಎಂಎಸ್ಪಿಯನ್ನು ಕ್ವಿಂಟಲ್ಗೆ 400 ರೂ. ಹೆಚ್ಚಿಸಿ 12,500 ರೂ. ಮಾಡಲಾಗಿದೆ.
ತೆಂಗು ಬೆಳೆಗಾರರಿಗೆ ಉತ್ತಮ ಲಾಭ ಖಚಿತಪಡಿಸಲು ಮತ್ತು ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು, ಉತ್ಪಾದನೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸಿನ ಮೇರೆಗೆ ಕೊಬ್ಬರಿಯ ‘ನ್ಯಾಯಯುತ ಮತ್ತು ಸರಾಸರಿ ಗುಣಮಟ್ಟ’ಕ್ಕೆ ಎಂಎಸ್ಪಿ ನಿಗದಿಪಡಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಫೇಡ್) ಹಾಗೂ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವು (ಎನ್ಸಿಸಿಎಫ್) ಕೇಂದ್ರ ನೋಡಲ್ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ ಎಂದು ಸಚಿವರು ಹೇಳಿದರು.