ಬೆಂಗಳೂರು, ಜು 10 (Daijiworld News/MSP): ಬೆಂಗಳೂರಿನ ಮಾರುತಿ ಸೇವಾ ನಗರದಲ್ಲಿ ಮೂರು ಹಂತದ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಹಾಗೂ ಮತ್ತೊಂದು ಕಟ್ಟಡ ಕುಸಿದು ದಂಪತಿ, ಮಗು ಸೇರಿದಂತೆ ಐವರು ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಮೃತರನ್ನು ನಾರಾಯಣ(26), ನಿರ್ಮಲಾ(20), ಅನುಷ್ಕಾ(3), ಬಿಹಾರ ಮೂಲದ ಶಂಭು ಕುಮಾರ್ (27) ಹಾಗೂ ಖಗನ್ ಸರ್ಕಾರ್ (48) ಎಂದು ಗುರುತಿಸಲಾಗಿದೆ.
ಬುಧವಾರ ಬೆಳಗಿನ ಜಾವ 2.15 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಮೂರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಹಾಗೂ ಅದರ ಪಕ್ಕದ ಬೇಸ್ಮೆಂಟ್ ಕುಸಿದು ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ, ಎನ್ಡಿಆರ್ಎಫ್, ರಾಜ್ಯ ವಿಪತ್ತು ಪರಿಹಾರ ಪಡೆ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಇಲ್ಲಿಯವರೆಗೆ ಕನಿಷ್ಠ ಎಂಟು ಜನರನ್ನು ಅವಶೇಷಗಳ ಅಡಿಯಿಂದ ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.
ಕಳಪೆ ಗುಣಪಟ್ಟದ ಕಾಮಗಾರಿ ಹಾಗೂ ಮುಂಜಾಗ್ರತ ಕ್ರಮ ವಹಿಸದಿರುವುದೇ ಈ ದುರಂತಕ್ಕೆ ಕಾರಣ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.