ತಿರುವನಂತಪುರಂ, ಡಿ. 13 (DaijiworldNews/TA): ಕೇರಳ ರಾಜಕೀಯದಲ್ಲಿ ಮಹತ್ವದ ತಿರುವು ಕಂಡುಬಂದಿದ್ದು, ರಾಜಧಾನಿ ತಿರುವನಂತಪುರಂ ಕಾರ್ಪೋರೇಶನ್ನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೇರಿದೆ. ಸುಮಾರು 45 ವರ್ಷಗಳಿಂದ ಎಲ್ಡಿಎಫ್ (ಕಮ್ಯೂನಿಸ್ಟ್) ಹಿಡಿತದಲ್ಲಿದ್ದ ಕಾರ್ಪೋರೇಶನ್ನ್ನು ಗೆಲ್ಲುವ ಮೂಲಕ ಬಿಜೆಪಿ ಹೊಸ ಇತಿಹಾಸ ನಿರ್ಮಿಸಿದೆ.

ತಿರುವನಂತಪುರಂ ಕಾರ್ಪೋರೇಶನ್ನ 101 ಸ್ಥಾನಗಳ ಪೈಕಿ 100 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಒಂದು ಸ್ಥಾನದಲ್ಲಿ ಅಭ್ಯರ್ಥಿ ನಿಧನರಾದ ಹಿನ್ನೆಲೆಯಲ್ಲಿ ಮತದಾನ ಮುಂದೂಡಲಾಗಿತ್ತು. ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 50 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಎಲ್ಡಿಎಫ್ 29 ಸ್ಥಾನಗಳಿಗೆ ಕುಸಿದರೆ, ಯುಡಿಎಫ್ (ಕಾಂಗ್ರೆಸ್) 19 ಸ್ಥಾನಗಳಿಗೆ ಸೀಮಿತಗೊಂಡಿದೆ. ಇನ್ನು ಇತರರು 2 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ.
ತಿರುವನಂತಪುರಂ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ನ ಭದ್ರಕೋಟೆಯೆಂದೇ ಪರಿಗಣಿಸಲಾಗಿದ್ದು, ಇಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಸಂಸದರಾಗಿದ್ದಾರೆ. ಇಂತಹ ಕ್ಷೇತ್ರದಲ್ಲೇ ಬಿಜೆಪಿ ನೇತೃತ್ವದ ಎನ್ಡಿಎ ಭರ್ಜರಿ ಜಯ ಸಾಧಿಸಿರುವುದು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ.
ಪಾಲಕ್ಕಾಡ್ ಹಾಗೂ ತ್ರಿಪೂಣಿತರ ಮುನ್ಸಿಪಾಲಿಟಿಗಳಲ್ಲೂ ಬಿಜೆಪಿ ಜಯ ಸಾಧಿಸಿದ್ದು, ಹಲವೆಡೆ ಪ್ರಬಲ ಪೈಪೋಟಿ ನೀಡಿದೆ. ಈ ಫಲಿತಾಂಶಗಳು 2026ರ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸ್ಪಷ್ಟ ಸಂದೇಶ ನೀಡಿದಂತಾಗಿದೆ. ಇದುವರೆಗೆ ಎಲ್ಡಿಎಫ್–ಯುಡಿಎಫ್ ನಡುವಿನ ಹೋರಾಟಕ್ಕೆ ಈಗ ಬಿಜೆಪಿ ಮೂರನೇ ಶಕ್ತಿಯಾಗಿ ಬಲವಾಗಿ ಪ್ರವೇಶಿಸಿರುವುದು ಗಮನಾರ್ಹವಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ರಾಜ್ಯದಲ್ಲಿ ಆಡಳಿತದಲ್ಲಿದ್ದರೂ, ಆಡಳಿತ ವಿರೋಧಿ ಅಲೆ ಪರಿಣಾಮವಾಗಿ ಈ ಬಾರಿ ಸ್ಥಳೀಯ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದೆ. ಒಟ್ಟಾರೆ ಫಲಿತಾಂಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಮುನ್ನಡೆ ಸಾಧಿಸಿದೆ.
ಕೇರಳದಲ್ಲಿ 6 ಕಾರ್ಪೋರೇಶನ್, 14 ಜಿಲ್ಲಾ ಪಂಚಾಯತ್, 87 ಮುನ್ಸಿಪಾಲಿಟಿ, 152 ಬ್ಲಾಕ್ ಪಂಚಾಯತ್ ಹಾಗೂ 941 ಗ್ರಾಮ ಪಂಚಾಯತ್ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಡಿಸೆಂಬರ್ 9 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.
ಆರು ಕಾರ್ಪೋರೇಶನ್ಗಳ ಪೈಕಿ ತಿರುವನಂತಪುರಂ ಬಿಜೆಪಿ ಕೈಸೇರಿದರೆ, ಕೊಲ್ಲಂ, ಕೊಚ್ಚಿ, ತ್ರಿಶೂರ್ ಹಾಗೂ ಕಣ್ಣೂರು ಸೇರಿ ನಾಲ್ಕು ಕಾರ್ಪೋರೇಶನ್ಗಳನ್ನು ಯುಡಿಎಫ್ ಗೆದ್ದುಕೊಂಡಿದೆ. ಕೇವಲ ಒಂದು ಕಾರ್ಪೋರೇಶನ್ ಎಲ್ಡಿಎಫ್ ಪಾಲಾಗಿದೆ. ಮುನ್ಸಿಪಾಲಿಟಿಗಳಲ್ಲಿ 86 ಪೈಕಿ 54ನ್ನು ಯುಡಿಎಫ್ ತನ್ನ ವಶಕ್ಕೆ ಪಡೆದಿದೆ.
ಈ ಫಲಿತಾಂಶಗಳು ಕೇರಳ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ದಾರಿ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣ ಮತ್ತಷ್ಟು ರೋಚಕವಾಗುವ ಸೂಚನೆ ನೀಡಿವೆ.