ಬೆಂಗಳೂರು, ಜು10(Daijiworld News/SS): ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಜನರ ಪಾಲಿಗೆ ಬದುಕಿಲ್ಲ, ಸತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ವರ್ಗಾವಣೆ ದಂಧೆ, ತುಘಲಕ್ ದರ್ಬಾರ್ ನಡೆಸುತ್ತಿರೋದನ್ನು ತಾವು ಬಹಿರಂಗಪಡಿಸಿದ್ದೀರಿ. 14 ಜನ ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಕ್ಷಣವೇ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಚಿವ ಡಿ.ಕೆ.ಶಿವಕುಮಾರ್ ಮುಂಬೈಗೆ ಹೋಗಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಸ್ಪೀಕರ್ ಕೊಠಡಿಯಲ್ಲಿ ರಾಜೀನಾಮೆ ಪತ್ರವನ್ನು ಹರಿದುಹಾಕಿದ್ದರು. ಈ ಮೂಲಕ ಶಾಸಕರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ. ಈ ಬೆಳವಣಿಗೆಯನ್ನು ಕೇಂದ್ರ ಗೃಹ ಸಚಿವರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ತಕ್ಷಣವೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕು. ಈ ಬಗ್ಗೆ ರಾಜ್ಯಪಾಲರಾದ ವಜುಭಾಯಿ ಆರ್. ವಾಲಾರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇವೆ. ಕುಮಾರಸ್ವಾಮಿಯವರೇ ನಿಮಗೆ ಬಹುಮತ ಇಲ್ಲ. ವಿಧಾನಸಭೆ ಅಧಿವೇಶನ ನಡೆಯುವ ಪ್ರಶ್ನೆಯೇ ಇಲ್ಲ. ಮಾನ ಮರ್ಯಾದೆಯಿದ್ದರೆ ರಾಜೀನಾಮೆ ನೀಡುತ್ತೀರಿ ಎಂದು ಹೇಳಿದರು.
ಮಧ್ಯಾಹ್ನ ಮೂರು ಗಂಟೆಗೆ ಸ್ಪೀಕರ್ ಅವರನ್ನು ಭೇಟಿ ಮಾಡಿ ಶಾಸಕರ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕೆಂದು ಕೇಳಲಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.