ಕೊಟ್ಟಾಯಂ, ಡಿ. 13 (DaijiworldNews/TA): ಕೊಟ್ಟಾಯಂನಲ್ಲಿ ನಡೆದ ಸಂಭ್ರಮಾಚರಣೆ ಸಂದರ್ಭ ಕಾಂಗ್ರೆಸ್ ಹಾಗೂ ಕೇರಳ ಕಾಂಗ್ರೆಸ್ (ಎಂ) ಕಾರ್ಯಕರ್ತರ ನಡುವೆ ಉಂಟಾದ ಘರ್ಷಣೆಯಲ್ಲಿ ಮಧ್ಯಪ್ರವೇಶಿಸಿದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಪಲ್ಲಿಕ್ಕೋತು ಮೂಲದ ಜಾನ್ ಪಿ. ಥಾಮಸ್ ಎಂದು ಗುರುತಿಸಲಾಗಿದೆ.

ಸಂಭ್ರಮಾಚರಣೆ ವೇಳೆ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಆರಂಭವಾಗಿದ್ದು, ಪರಿಸ್ಥಿತಿಯನ್ನು ಗಮನಿಸಿದ ಜಾನ್ ಪಿ. ಥಾಮಸ್ ಅವರು ತಮ್ಮ ಸಹೋದರನೊಂದಿಗೆ ಸ್ಥಳಕ್ಕೆ ತೆರಳಿ ಘರ್ಷಣೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಅವರ ಸಹೋದರರು ಕೇರಳ ಕಾಂಗ್ರೆಸ್ (ಎಂ) ಕ್ಷೇತ್ರಾಧ್ಯಕ್ಷರಾಗಿದ್ದಾರೆ ಎನ್ನಲಾಗಿದೆ.
ಘರ್ಷಣೆಯ ನಡುವೆಯೇ ಜಾನ್ ಪಿ. ಥಾಮಸ್ ಅವರು ಅಸ್ವಸ್ಥಗೊಂಡು ಕುಸಿದು ಬಿದ್ದರು. ಅವರು ಈಗಾಗಲೇ ಹೃದಯ ಸಂಬಂಧಿತ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.