ಬೆಂಗಳೂರು, ಜು 10 (Daijiworld News/MSP): ಮುಂಬೈಗೆ ಡಿ.ಕೆ ಶಿವಕುಮಾರ್ ಯಾರಿಗೂ ಹೇಳದೆ ತೆರಳಿದ್ದಾರೆ. ಅವರ ಈ ನಡೆ ನನ್ನ ಗಮನಕ್ಕಾಗಲಿ ಅಥವಾ ಪಕ್ಷಕ್ಕಾಗಲಿ ಬಂದಿಲ್ಲ. ಒಂದು ವೇಳೆ ಅತೃಪ್ತರ ಮನವೊಲಿಕೆಗಾಗಿ ಅವರು ತೆರಳುತ್ತಾರೆ ಎಂದು ಮುಂಚಿತವಾಗಿ ತಿಳಿದಿದ್ದಾರೆ ಇನ್ನೂ ಹಲವಾರು ನಾಯಕರು ಅವರೊಂದಿಗೆ ಹೋಗಿ ನಮ್ಮ ಶಾಸಕರನ್ನು ಮನವೊಲಿಸಬಹುದಿತ್ತು. ಆದರೆ ಹೀಗೆ ಅವರೊಬ್ಬರೇ ಏಕಾಏಕಿ ಹೋಗಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಡಿಕೆಶಿ ನಡೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭೆಯೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ , ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಗೆ ನಾನೇ ಕಾರಣ ಎಂಬಂತೆ ಕೆಲವರು ಆರೋಪಿಸುತ್ತಿದ್ದಾರೆ. ಆದರೆ ನಾನು ಮೊದಲಿನಿಂದಲೂ ಅತೃಪ್ತರನ್ನು ಮನವೊಲಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ನನ್ನ ಜವಾಬ್ದಾರಿಯನ್ನ ನಾನು ನಿಭಾಯಿಸಿದ್ದೇನೆ. ಕೆಲ ತಿಂಗಳ ಹಿಂದೆ ಬೆಳಗಾವಿ ಜಿಲ್ಲೆಯ ವಿಷಯದಲ್ಲಿ ಸಚಿವ ಡಿ.ಕೆ ಶಿವಕುಮಾರ್ ಮೂಗು ತೂರಿಸುತ್ತಿದ್ದಾರೆಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದರು. ಈ ವಿಚಾರವಾಗಿಯೂ ನನ್ನನ್ನು ದೂಷಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ರು.
ಈ ಹಿಂದೆ ತಮ್ಮ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ದೊರಕುತ್ತಿಲ್ಲ ಎಂದು ಹಲವು ಶಾಸಕರು ಬೇಸರ ವ್ಯಕ್ತಪಡಿಸಿದ್ದರು. ಇದನ್ನ ಮುಖ್ಯಮಂತ್ರಿಗಳಾದವರೂ ಬಗೆಹರಿಸಬೇಕಿತ್ತು. ಈಗ ಎಲ್ಲದಕ್ಕೂ ನನ್ನ ಬಗ್ಗೆ ದೂಷಿಸಿದರೆ ಹೇಗೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಗೆ ಮೂಲ ಕಾರಣ ಯಾರು ಎಂದು ತಿಳಿದು ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.