ಆನೇಕಲ್, ಡಿ. 14 (DaijiworldNews/TA): ಕುಡಿದ ಮತ್ತಿನಲ್ಲಿ ಬಸ್ ಕದ್ದು ಪರಾರಿಯಾಗಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬಗಳು ಹಾಗೂ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಥಳಿ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಅಪಘಾತದ ಪರಿಣಾಮ ಬಸ್ನ ಮುಂಭಾಗಕ್ಕೆ ತೀವ್ರ ಹಾನಿಯಾಗಿದೆ. ರಾತ್ರಿ ಸಮಯದಲ್ಲಿ ಜನ ಸಂಚಾರ ಕಡಿಮೆಯಾಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಪೊಲೀಸ್ ಮಾಹಿತಿ ಪ್ರಕಾರ, ಎಂದಿನಂತೆ ಚಾಲಕ ಬಸ್ ಅನ್ನು ಥಳಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿ ತೆರಳಿದ್ದ. ಈ ಸಂದರ್ಭ ಕುಡಿದ ಮತ್ತಿನಲ್ಲಿ ಬಂದ ನಾಲ್ವರು ಅಸಾಮಿಗಳು ಬಸ್ನ ವೈರ್ಗಳನ್ನು ಕಟ್ ಮಾಡಿ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಬಸ್ ಚಾಲನೆ ಆರಂಭಿಸಿದ ಕೂಡಲೇ ನಿಯಂತ್ರಣ ತಪ್ಪಿ, ಬಸ್ ಎರಡು ವಿದ್ಯುತ್ ಕಂಬಗಳು ಹಾಗೂ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ.
ಘಟನೆ ಕಂಡ ಸಾರ್ವಜನಿಕರು ತಕ್ಷಣ ಬಸ್ ತಡೆದು ನಿಲ್ಲಿಸಿದ್ದು, ಈ ವೇಳೆ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಓರ್ವ ಆರೋಪಿಯನ್ನು ಹಿಡಿದು ಸ್ಥಳದಲ್ಲೇ ಥಳಿಸಿದ್ದು, ನಂತರ ಆನೇಕಲ್ ಪೊಲೀಸರಿಗೆ ಒಪ್ಪಿಸಲಾಗಿದೆ. ಪೊಲೀಸರು ಬಂಧಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪರಾರಿಯಾದ ಮೂವರ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.