ನವದೆಹಲಿ, ಡಿ. 14 (DaijiworldNews/TA): ಪ್ರತಿಷ್ಠಿತ ಫೋರ್ಬ್ಸ್ ಮ್ಯಾಗಜಿನ್ 2025ರ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಭಾರತೀಯ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಅವರ ಬಳಿಕ ಎಚ್ಸಿಎಲ್ ಟೆಕ್ನಾಲಜೀಸ್ನ ಸಿಇಒ ರೋಶನಿ ನಾಡಾರ್ ಎರಡನೇ ಸ್ಥಾನದಲ್ಲಿದ್ದು, ಬಯೋಕಾನ್ ಸಂಸ್ಥೆಯ ಸ್ಥಾಪಕಿ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷೆ ಬೆಂಗಳೂರಿನ ಕಿರಣ್ ಮಜುಂದಾರ್ ಶಾ ಮೂರನೇ ಸ್ಥಾನ ಪಡೆದಿದ್ದಾರೆ.
ಜಾಗತಿಕ ಮಟ್ಟದಲ್ಲಿ ಯುರೋಪಿಯನ್ ಕಮಿಷನ್ನ ಮೊದಲ ಮಹಿಳಾ ಅಧ್ಯಕ್ಷೆಯಾಗಿರುವ ಉರ್ಸುಲಾ ವಾನ್ ಡೆರ್ ಲೇನ್ ಮೊದಲ ಸ್ಥಾನ ಪಡೆದಿದ್ದಾರೆ. ಜಾಗತಿಕ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ 24ನೇ ಸ್ಥಾನ, ರೋಶನಿ ನಾಡಾರ್ 76ನೇ ಸ್ಥಾನ ಹಾಗೂ ಕಿರಣ್ ಮಜುಂದಾರ್ ಶಾ 83ನೇ ಸ್ಥಾನ ಗಳಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಸಾಧನೆ: ಭಾರತದ ಎರಡನೇ ಮಹಿಳಾ ವಿತ್ತ ಸಚಿವೆ ಎಂಬ ಗೌರವಕ್ಕೆ ಪಾತ್ರರಾಗಿರುವ ನಿರ್ಮಲಾ ಸೀತಾರಾಮನ್ ಅವರು, ಸತತವಾಗಿ ಎಂಟನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ ಅಪರೂಪದ ಸಾಧನೆ ಮಾಡಿದ್ದಾರೆ. ದೇಶದ ಆರ್ಥಿಕ ನೀತಿಗಳ ರೂಪುಗೊಳಿಸುವಿಕೆ, ರಾಷ್ಟ್ರೀಯ ಹಣಕಾಸು ನಿರ್ವಹಣೆ ಹಾಗೂ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಫೋರ್ಬ್ಸ್ ಪ್ರಶಂಸಿಸಿದೆ.
ಇನ್ನೊಂದೆಡೆ, ರೋಶನಿ ನಾಡಾರ್ ಮತ್ತು ಕಿರಣ್ ಮಜುಂದಾರ್ ಶಾ ಅವರು ಸ್ವಂತ ಸಾಮರ್ಥ್ಯದಿಂದ ಉದ್ಯಮ ಲೋಕದಲ್ಲಿ ಯಶಸ್ಸು ಗಳಿಸಿದ ಸ್ವಯಂಸಿದ್ಧ ಮಹಿಳೆಯರಾಗಿದ್ದಾರೆ ಎಂಬುದನ್ನೂ ಫೋರ್ಬ್ಸ್ ವಿಶೇಷವಾಗಿ ಉಲ್ಲೇಖಿಸಿದೆ.