ಬೆಳಗಾವಿ, ಡಿ. 14 (DaijiworldNews/TA): ಗೋವಾದಿಂದ ನವದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಖಾನಾಪುರದ ಮಾಜಿ ಶಾಸಕಿ ಹಾಗೂ ಗೋವಾದ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್, ತಕ್ಷಣ ವೈದ್ಯಕೀಯ ನೆರವು ನೀಡುವ ಮೂಲಕ ಅಮೆರಿಕದ ಯುವತಿಯೊಬ್ಬಳ ಪ್ರಾಣ ಉಳಿಸಿದ ಮಾನವೀಯ ಘಟನೆ ಸಂಭವಿಸಿದೆ.

ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ, ಯುವತಿಗೆ ತೀವ್ರ ತರನಾದ ನಡುಕ ಶುರುವಾಗಿದ್ದು, ಪ್ರಜ್ಞಾಹೀನಳಾಗಿ ಕುಸಿದುಬಿದ್ದಳು. ಈ ವೇಳೆ ವೈದ್ಯೆಯಾಗಿ ತಜ್ಞತೆ ಹೊಂದಿರುವ ಡಾ. ಅಂಜಲಿ ನಿಂಬಾಳ್ಕರ್ ಕಾರ್ಡಿಯೋ - ಪಲ್ಮನರಿ ರಿಸಸ್ಸಿಟೇಷನ್ ನೀಡಿದರು. ಅವರ ಸಮಯೋಚಿತ ಚಿಕಿತ್ಸೆ ಯುವತಿಯ ಜೀವ ಉಳಿಸಿದೆ. ಅರ್ಧ ಗಂಟೆ ನಂತರ ಯುವತಿ ಮತ್ತೊಮ್ಮೆ ಕುಸಿದುಬಿದ್ದಾಗ, ವಿಮಾನದಲ್ಲಿದ್ದವರು ಆತಂಕಗೊಂಡರು. ಆದರೆ ಡಾ. ಅಂಜಲಿ ಅವರ ಧೈರ್ಯ ಮತ್ತು ಶ್ರಮದಿಂದ, ಯುವತಿ ಮತ್ತೆ ಚೇತರಿಸಿಕೊಂಡರು.
ಡಾ. ಅಂಜಲಿ ನಿಂಬಾಳ್ಕರ್ ಇಡೀ ಪ್ರಯಾಣದ ಅವಧಿಯಲ್ಲಿಯೂ ಯುವತಿಯ ಪಕ್ಕದಲ್ಲೇ ನಿಂತು ನಿರಂತರವಾಗಿ ಕಾಳಜಿ ವಹಿಸಿದ್ದರು. ದೆಹಲಿಗೆ ವಿಮಾನ ಇಳಿಯುವ ಮುನ್ನ ತುರ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ, ಬಂದ ತಕ್ಷಣವೇ ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವ ಕ್ರಮ ಕೈಗೊಂಡಿದ್ದರು.
ಈ ಮಾನವೀಯ ಸೇವೆಯನ್ನು ವಿಮಾನದ ಪೈಲಟ್, ಸಿಬ್ಬಂದಿ ಹಾಗೂ ಸಹಪ್ರಯಾಣಿಕರು ಶ್ಲಾಘಿಸಿದ್ದಾರೆ. ಡಾ. ಅಂಜಲಿ ನಿಂಬಾಳ್ಕರ್ ಅವರ ಸಮಯೋಚಿತ ನಿರ್ವಹಣೆ ಮತ್ತು ತ್ವರಿತ ವೈದ್ಯಕೀಯ ನೆರವು, ಮಾನವೀಯತೆಯ ಉದಾಹರಣೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.