ಉತ್ತರ ಪ್ರದೇಶ, ಡಿ. 15 (DaijiworldNews/AA): ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಐಎಎಸ್-ಐಪಿಎಸ್ ಆಗುವ ಕನಸಿನೊಂದಿಗೆ ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಅದರಲ್ಲಿ ಸುಮಾರು ಒಂದು ಸಾವಿರ ಅಭ್ಯರ್ಥಿಗಳು ಅಂತಿಮವಾಗಿ ಆಯ್ಕೆಯಾಗುತ್ತಾರೆ. ಹೀಗೆ ತನ್ನ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ಅದಿತಿ ವರ್ಷ್ಣಿ ಅವರ ಯಶೋಗಾಥೆ ಇದು.

ಸಾವಿರದ ಆಸುಪಾಸಿನಲ್ಲಿರುವ ಹುದ್ದೆಗಳಿಗಾಗಿ ಲಕ್ಷಾಂತರ ಜನರು ಕೋಚಿಂಗ್ ಸೇರಿ, ವರ್ಷವಿಡೀ ಅಧ್ಯಯನ ಮಾಡುತ್ತಾರೆ. ಆದರೆ ಕೆಲವರು ಯಾವುದೇ ಕೋಚಿಂಗ್ ಇಲ್ಲದೆ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ ಐಎಎಸ್ ಅಧಿಕಾರಿ ಅದಿತಿ ವರ್ಷ್ಣಿ ಅವರು ಸ್ವಯಂ ಅಧ್ಯಯನದ ಮೂಲಕ ತನ್ನ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ 57 ನೇ ರ್ಯಾಮಕ್ ಪಡೆದು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅದಿತಿ ವರ್ಷ್ಣಿ ಉತ್ತರ ಪ್ರದೇಶದ ಬರೇಲಿ ನಿವಾಸಿ. ಅವರ ಶಾಲಾ ಶಿಕ್ಷಣವನ್ನು ಬರೇಲಿಯ ಬಿಷಪ್ ಕೊನ್ರಾಡ್ ಶಾಲೆಯಲ್ಲಿ ಮಾಡಿದ್ದಾರೆ. ಅವರು ಮೂವರು ಒಡಹುಟ್ಟಿದವರಲ್ಲಿ ಹಿರಿಯಳು. ಅವರ ತಂದೆ ಸ್ಥಳೀಯ ಬಟ್ಟೆ ವ್ಯಾಪಾರಿ ಮತ್ತು ತಾಯಿ ಗೃಹಿಣಿ.
ಅದಿತಿ ದೆಹಲಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಬಿಎ ಆನರ್ಸ್ ಪದವಿಯನ್ನು ಪಡೆದಿದ್ದಾರೆ. ಇದಾದ ನಂತರ ಅವರು ಸ್ನಾತಕೋತ್ತರ ಪದವಿಗೆ ದಾಖಲಾದರು. ಆದರೆ ಮಧ್ಯದಲ್ಲೇ ವ್ಯಾಸಂಗ ಬಿಟ್ಟು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು.
ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಸಮಾಜಶಾಸ್ತ್ರವನ್ನು ಅದಿತಿ ಅವರು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. 2022ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅದಿತಿ ಅವರು ಅಖಿಲ ಭಾರತ 57ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ.