ಬೆಂಗಳೂರು, ಜು10(Daijiworld News/SS): ರಾಜ್ಯದ ಉತ್ತಮ ಭವಿಷ್ಯಕ್ಕೆ ಯಾವುದು ಸರಿ ಎಂದು ಜನರೇ ನಿರ್ಧಾರ ಮಾಡಬೇಕು ಎಂದು ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೆಲ ರಾಜಕೀಯ ಕಾರಣಗಳಿಂದಾಗಿ ರಾಜ್ಯ ಸರಕಾರ ಮಾಡುತ್ತಿರುವ ಉತ್ತಮ ಕಾರ್ಯಕ್ರಮ, ಅನುಷ್ಠಾನ ಮಾಡುತ್ತಿರುವ ಯೋಜನೆಗಳ ಬಗ್ಗೆ ಸರಿಯಾದ ಪ್ರಚಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ನಾನು ಇದುವರೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ನೀಡುವ ಅವಶ್ಯಕತೆಯೂ ಇಲ್ಲ. 12 ರಿಂದ ನಡೆಯುವ ಅಧಿವೇಶನದಲ್ಲಿ ಎಲ್ಲ ವಿಷಯಗಳನ್ನು ಚರ್ಚಿಸಲು ಜನಪ್ರತಿನಿಧಿಗಳಿಗೆ ಅವಕಾಶವಿದೆ. ಪ್ರತಿಪಕ್ಷದವರು ಬೇಕಾದಂತೆ ಮಾತಾಡುತ್ತಿದ್ದಾರೆ. ಜನರು ಇವೆಲ್ಲವನ್ನೂ ತೀರ್ಮಾನ ಮಾಡಬೇಕು. ರಾಜ್ಯದ ಉತ್ತಮ ಭವಿಷ್ಯಕ್ಕೆ ಯಾವುದು ಸರಿ ಎಂದು ಜನರೇ ನಿರ್ಧಾರ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಸಚಿವ ವೆಂಕಟರಮಣಪ್ಪ, ಯಡಿಯೂರಪ್ಪ ಜೈಲಿಗೆ ಹೋಗಿದ್ದನ್ನು ನೆನಪಿಸಿಕೊಳ್ಳಲಿ. ಅವರು ನಮಗೆ ನೀತಿ ಹೇಳಲು ಬರುತ್ತಾರೆ. ಶಾಸಕರು ವಾಪಸ್ ಬನ್ನಿ, ನಿಮ್ಮನ್ನೂ ಮಂತ್ರಿಗಳಾಗಿ ಮಾಡೋಣ. 5 ವರ್ಷ ಸರಕಾರ ನಡೆಸೋಣ ಎಂದು ಹೇಳಿದರು.