ನವದೆಹಲಿ, ಡಿ. 15 (DaijiworldNews/TA): ಚಾಟ್ಸ್ ಎಂದಾಕ್ಷಣ ಪಾನಿಪುರಿ, ಮಸಾಲಪುರಿ, ಸೇವ್ ಪುರಿ, ದಹಿ ಪುರಿ ಹೀಗೆ ಬಾಯಲ್ಲಿ ನೀರು ತರಿಸುವ ಬೀದಿಬದಿ ಆಹಾರಗಳ ಪಟ್ಟಿ ನೆನಪಾಗುತ್ತದೆ. ಈ ಸಾಲಿನಲ್ಲಿ ಬಹುತೇಕರ ನೆಚ್ಚಿನ ಸ್ಟ್ರೀಟ್ ಫುಡ್ ಆಗಿರುವ ಗೋಲ್ಗಪ್ಪಾ ಈಗ ವಿದೇಶಿಗರ ಮನಸ್ಸನ್ನೂ ಗೆಲ್ಲತೊಡಗಿದೆ. ಅದರಲ್ಲೂ ವಿದೇಶಿ ಮಹಿಳೆಯೊಬ್ಬರು ಗೋಲ್ಗಪ್ಪಾ ಸವಿದು ನೀಡಿದ ಮುದ್ದಾದ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ವಿದೇಶಿ ಮಹಿಳೆ ಯಾವುದೋ ಸಂಭ್ರಮದ ಸಮಾರಂಭದಲ್ಲಿ ಭಾಗಿಯಾಗಿರುವಂತೆ ಕಾಣಿಸುತ್ತಾರೆ. ಅವರು ನೀಲಿ ಬಣ್ಣದ ಸೀರೆ ಧರಿಸಿದ್ದು, ಅದಕ್ಕೆ ಹೊಂದುವ ಆಭರಣಗಳಿಂದ ಸಿಂಗರಿಸಿಕೊಂಡಿದ್ದಾರೆ. ಕೈಯಲ್ಲಿ ತಟ್ಟೆ ಹಿಡಿದು, ತಮ್ಮ ಮುಂದೆ ಇರುವ ಆಹಾರ ಏನು ಎಂದು ಕೇಳುವ ದೃಶ್ಯವೂ ಇದೆ. ಅದಕ್ಕೆ ಎದುರಿನ ವ್ಯಕ್ತಿ ‘ಗೋಲ್ಗಪ್ಪಾ’ ಎಂದು ತಿಳಿಸುತ್ತಾರೆ.
ಆ ಬಳಿಕ ಆ ಮಹಿಳೆ ಗೋಲ್ಗಪ್ಪಾವನ್ನು ರುಚಿ ನೋಡುತ್ತಾರೆ. ಮೊದಲ ಕವಲಿನಲ್ಲೇ ಅದರ ಗರಿಗರಿತನ ಮತ್ತು ಮಸಾಲೆಯ ರುಚಿಗೆ ಫಿದಾ ಆಗಿರುವಂತೆ ಕಾಣುತ್ತಾರೆ. ಖುಷಿಯನ್ನು ತಡೆದುಕೊಳ್ಳಲಾರದೆ, ಅಲ್ಲಿಯೇ ನೃತ್ಯ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಈ ಮುದ್ದಾದ ರಿಯಾಕ್ಷನ್ನೇ ನೆಟ್ಟಿಗರ ಗಮನ ಸೆಳೆದಿದೆ.
ಈ ವಿಡಿಯೋ ಈಗಾಗಲೇ 14 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ವಿಭಿನ್ನ ರೀತಿಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಒಬ್ಬರು, “ಈಕೆ ಒಂದು ಕ್ಷಣ ನಿದ್ದೆ ಮಾಡಿದಂತಿತ್ತು” ಎಂದು ಹಾಸ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಗೋಲ್ಗಪ್ಪಾ ರುಚಿಗೆ ವಿದೇಶಿಗರೂ ಫುಲ್ ಫಿದಾ ಆಗಿದ್ದಾರೆ” ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, “ಊಟ ಮಾಡುವಾಗ ತಲೆ ಅಲೆಯುತ್ತಿದ್ದರೆ ಅದು ಊಟ ತುಂಬಾ ರುಚಿಯಾಗಿದೆ ಅನ್ನೋದಕ್ಕೆ ಸಿಂಬಲ್” ಎಂದು ಬರೆದಿದ್ದಾರೆ.
ಒಟ್ಟಿನಲ್ಲಿ, ಭಾರತೀಯ ಬೀದಿಬದಿ ಆಹಾರಗಳ ಮಾಯಾಜಾಲವು ದೇಶದ ಗಡಿ ದಾಟಿ ವಿದೇಶಿಗರನ್ನೂ ಸೆಳೆಯುತ್ತಿದೆ ಎಂಬುದಕ್ಕೆ ಈ ಗೋಲ್ಗಪ್ಪಾ ವಿಡಿಯೋ ಮತ್ತೊಂದು ಉದಾಹರಣೆಯಾಗಿ ಪರಿಣಮಿಸಿದೆ.