ನವದೆಹಲಿ, ಡಿ. 15 (DaijiworldNews/AA): ಗೋವಾ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನೈಟ್ಕ್ಲಬ್ ಮಾಲೀಕರಾದ ಲೂಥ್ರಾ ಸಹೋದರರ ಗಡೀಪಾರು ಪ್ರಕ್ರಿಯೆಯನ್ನು ಸಿಬಿಐ ಆರಂಭಿಸಿದ್ದು, ನಾಳೆ ದೆಹಲಿಗೆ ಕರೆತರಲಾಗುತ್ತಿದೆ. ಗೋವಾ ಪೊಲೀಸರು ಕೂಡ ಇಂದು ದೆಹಲಿಗೆ ತೆರಳುತ್ತಿದ್ದು, ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.

"ಗೋವಾ ಪೊಲೀಸರು ಥೈಲ್ಯಾಂಡ್ಗೆ ತೆರಳುವುದಿಲ್ಲ. ಬದಲಿಗೆ ಲೂಥ್ರಾ ಸಹೋದರರಾದ ಸೌರಭ್ ಹಾಗೂ ಗೌರವ್ ಅನ್ನು ಭಾರತಕ್ಕೆ ಕರೆತರುತ್ತಿದ್ದು, ಮಂಗಳವಾರ ದೆಹಲಿಗೆ ತಲುಪಲಿದ್ದಾರೆ. ಇಬ್ಬರನ್ನು ದೆಹಲಿಗೆ ಕೋರ್ಟ್ಗೆ ಹಾಜರುಪಡಿಸಿದ ಬಳಿಕ ಗೋವಾ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗೋವಾ ಪೊಲೀಸರು ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಅಂಜುನಾ ಪೊಲೀಸ್ ಠಾಣೆಗೆ ಕರೆದೊಯ್ದು, ಬಳಿಕ ಡಿ.17ರಂದು ಮಾಪುಸಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಇನ್ನೂ ಈಗಾಗಲೇ ಈ ಪ್ರಕರಣ ಸಂಬಂಧ ಗೋವಾ ಸರ್ಕಾರ ವಿಶೇಷ ತಂಡವನ್ನು ರಚಿಸಿದ್ದು, ಬಿಎನ್ಎಸ್ನ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈವರೆಗೆ ಪ್ರಕರಣ ಸಂಬಂಧ 6 ಜನರನ್ನು ಬಂಧಿಸಲಾಗಿದ್ದು, ಗೋವಾ ಸರ್ಕಾರದ ಆದೇಶದಂತೆ ಲೂಥ್ರಾ ಸಹೋದರರ ಒಡೆತನದಲ್ಲಿದ್ದ ಮತ್ತೊಂದು ನೈಟ್ಕ್ಲಬ್ನ್ನು ನೆಲಸಮಗೊಳಿಸಲಾಗಿದೆ. ಪ್ರಕರಣ ಸಂಬಂಧ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.