ಶಿವಮೊಗ್ಗ, ಡಿ. 15 (DaijiworldNews/AK): ಮಲೆನಾಡಿನಲ್ಲಿ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಜ್ (ಕೆಎಫ್ಡಿ) ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಈ ಬಾರಿ ಅವಧಿಗೂ ಮುನ್ನವೇ ಕೆ.ಎಫ್.ಡಿ. ಕೇಸ್ಗಳ ಸಂಖ್ಯೆ 8ಕ್ಕೆ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮಲೆನಾಡು ಜಿಲ್ಲೆಯ ಶಿವಮೊಗ್ಗದಲ್ಲಿ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ.
ಹೀಗಾಗಿ ಮಲೆನಾಡು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಈ ಸೋಂಕು ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಕಂಡುಬರುತ್ತಿತ್ತು. ಆರೋಗ್ಯ ಇಲಾಖೆ ಇದಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನ ಸಹ ತೆಗೆದುಕೊಳ್ಳುತ್ತಿತ್ತು. ಆದರೆ ಈ ವರ್ಷ ಡಿಸೆಂಬರ್ ತಿಂಗಳಲ್ಲೇ ಈ ಸೋಂಕು ಕಾಣಿಸಿಕೊಂಡಿದೆ.
ಇದೀಗ 7 ಜನರಿಗೆ ಪಾಸಿಟಿವ್ ಬಂದಿದೆ. ಇಲ್ಲಿಯವರೆಗೆ ಒಟ್ಟು 8 ಜನರಲ್ಲಿ ಕೆ.ಎಫ್.ಡಿ. ಸೋಂಕು ಕಾಣಿಸಿಕೊಂಡಿದೆ. ಈ ಎಂಟು ಜನರಲ್ಲಿ ಒಬ್ಬರು ಮಣಿಪಾಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಮತ್ತೊಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ. ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಯಲ್ಲಿ ಆರು ಜನರು ಕೆಎಫ್ಡಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಾರಿ ನವೆಂಬರ್ನಿಂದಲೇ ಸರ್ವೇಕ್ಷಣೆ ಆರಂಭಿಸಿರುವುದರಿಂದ ಆರೋಗ್ಯ ಇಲಾಖೆ ನಿರೀಕ್ಷೆಗೂ ಮೀರಿ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಮಂಗನ ಕಾಯಿಲೆಗೆ ಲಸಿಕೆ ನಿಲ್ಲಿಸಿ ಮೂರು ವರ್ಷ ಕಳೆದಿದೆ. ಸದ್ಯ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ.