ಶ್ರೀನಗರ, ಡಿ. 16 (DaijiworldNews/AA): ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನ ಸಿಬ್ಬಂದಿಯೊಬ್ಬರು ಹುತಾತ್ಮರಾಗಿರುವ ಘಟನೆ ಉಧಂಪುರದಲ್ಲಿ ನಡೆದಿದೆ.

ಹುತಾತ್ಮ ಪೊಲೀಸ್ ಅಧಿಕಾರಿಯನ್ನು ಪೂಂಚ್ ಜಿಲ್ಲೆಯ ಮೆಂಧರ್ ನಿವಾಸಿ ಅಮ್ಜದ್ ಪಠಾಣ್ ಎಂದು ಗುರುತಿಸಲಾಗಿದೆ.
ಉಧಂಪುರದ ಮಜಲ್ಟಾ ಪ್ರದೇಶದ ಸೋಹನ್ ಗ್ರಾಮದ ಬಳಿ ಸೋಮವಾರ ಮೂವರು ಭಯೋತ್ಪಾದಕರು ಅರಣ್ಯ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ದೊರೆತಿತ್ತು. ಇದರ ಬೆನ್ನಲ್ಲೇ ಎನ್ಕೌಂಟರ್ ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನಾಪಡೆಗಳು ಉಧಂಪುರ ಜಿಲ್ಲೆಯ ಸೋಹನ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದವು. ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಪೋಸ್ಟ್ ಮಾಡಿದೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಜಮ್ಮು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಭೀಮ್ ಸೇನ್ ಟುಟಿ ಅವರು, "ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ನಿಖರವಾದ ಮಾಹಿತಿ ದೊರೆತ ನಂತರ ಎನ್ಕೌಂಟರ್ ಪ್ರಾರಂಭವಾಯಿತು. ವಿಶೇಷ ಕಾರ್ಯಾಚರಣೆ ಗುಂಪಿನ ಜೊತೆಗೆ ಸೇನೆ ಮತ್ತು ಸಿಆರ್ಪಿಎಫ್ ಕಾರ್ಯಾಚರಣೆಯನ್ನು ನಡೆಸುತ್ತಿವೆ" ಎಂದು ಮಾಹಿತಿ ನೀಡಿದ್ದಾರೆ.