ನವದೆಹಲಿ, ಡಿ. 16 (DaijiworldNews/AA): ಗೋವಾ ನೈಟ್ಕ್ಲಬ್ನ ಅಗ್ನಿ ದುರಂತದಲ್ಲಿ 25 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ನೈಟ್ಕ್ಲಬ್ ಮಾಲೀಕರಾದ ಗೌರವ್ ಲುತ್ರಾ ಮತ್ತು ಸೌರಭ್ ಲುತ್ರಾ ಸಹೋದರರನ್ನು ಮಂಗಳವಾರ ಥೈಲ್ಯಾಂಡ್ ಅಧಿಕಾರಿಗಳು ಭಾರತಕ್ಕೆ ಗಡಿಪಾರು ಮಾಡಿದ್ದಾರೆ.

ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಮತ್ತು ನೈಟ್ಕ್ಲಬ್ ನಿರ್ವಹಣೆಯಲ್ಲಿ ಸುರಕ್ಷತಾ ನಿಯಮ ಉಲ್ಲಂಘನೆ ಮತ್ತು ಲೋಪಗಳ ಬಗ್ಗೆ ತನಿಖೆ ನಡೆಯುತ್ತಿರುವ ಮಧ್ಯೆ ಆರೋಪಿಗಳ ಗಡಿಪಾರು ಮಾಡಲಾಗಿದೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್ಕ್ಲಬ್ನ ಸಹ-ಮಾಲೀಕರಾದ ಲುತ್ರಾ ಸಹೋದರರು, ಅಗ್ನಿ ಅವಘಡದ ನಂತರ ಥೈಲ್ಯಾಂಡ್ನ ಫುಕೆಟ್ಗೆ ಪರಾರಿಯಾಗಿದ್ದರು. ಅವರಿಬ್ಬರ ವಿರುದ್ಧ ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಯ್ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಭಾರತೀಯ ರಾಯಭಾರ ಕಚೇರಿಯ ಮಧ್ಯ ಪ್ರವೇಶದ ನಂತರ ಡಿಸೆಂಬರ್ 11 ರಂದು ಫುಕೆಟ್ನಲ್ಲಿ ಥಾಯ್ ಅಧಿಕಾರಿಗಳು ಈ ಇಬ್ಬರನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಮುಂದಿನ ಕಾನೂನು ಕ್ರಮಕ್ಕಾಗಿ ಅವರನ್ನು ಗಡೀಪಾರು ಮಾಡಲಾಗಿದ್ದು, ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತಿದೆ.