ಬೆಂಗಳೂರು, ಡಿ. 16 (DaijiworldNews/TA): ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ತಮ್ಮ 66ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಶುಭಾಶಯ ಕೋರಿದ್ದು, ಅದಕ್ಕೆ ಕುಮಾರಸ್ವಾಮಿ ಭಾವುಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ, “ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಕ್ಷೇತ್ರದಲ್ಲಿ ಅವರ ಕಾರ್ಯದ ಮೂಲಕ ಆತ್ಮನಿರ್ಭರ ಭಾರತದ ಪ್ರಯತ್ನಗಳನ್ನು ಬಲಪಡಿಸುತ್ತಿದ್ದಾರೆ. ಸಮಾಜ ಸೇವೆಯಲ್ಲಿ ದೀರ್ಘ ಮತ್ತು ಆರೋಗ್ಯವಂತ ಜೀವನಕ್ಕೆ ಶುಭಾಶಯಗಳು” ಎಂದು ಬರೆದಿದ್ದಾರೆ.
ಪ್ರಧಾನಿ ಮೋದಿಯವರ ಶುಭಾಶಯಕ್ಕೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಪ್ರಧಾನಿಗಳ ಆಶೀರ್ವಾದದಿಂದ ತಾವು ಭಾವುಕರಾಗಿದ್ದು, ವಿನೀತರಾಗಿದ್ದೇನೆ ಎಂದು ತಿಳಿಸಿದ್ದಾರೆ. “ಮಾನ್ಯ ಪ್ರಧಾನಿಗಳ ಪಿತೃವಾತ್ಸಲ್ಯಕ್ಕೆ ನಾನು ಧನ್ಯನಾಗಿದ್ದೇನೆ. ಅವರ ಚಿಂತನಶೀಲ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ನನ್ನ ಮೇಲಿನ ನಂಬಿಕೆಗೆ ನಾನು ಚಿರಋಣಿಯಾಗಿದ್ದೇನೆ” ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಮುಂದುವರೆಸಿ, “ಪ್ರಧಾನಮಂತ್ರಿಗಳ ಶುಭಾಶೀರ್ವಾದವು ಸಾರ್ವಜನಿಕ ಸೇವೆ ಕೇವಲ ಜವಾಬ್ದಾರಿಯಲ್ಲ, ಅದು ರಾಷ್ಟ್ರ ಮತ್ತು ಸಮಾಜದ ಹಿತಕ್ಕಾಗಿ ಜೀವಮಾನದ ಸಮರ್ಪಣೆ ಎಂಬುದನ್ನು ನೆನಪಿಸುತ್ತದೆ. ಅವರ ಮೆಚ್ಚುಗೆಯು ನನ್ನನ್ನು ಇನ್ನಷ್ಟು ಉತ್ತೇಜಿಸಿದ್ದು, ರಾಷ್ಟ್ರಸೇವೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ” ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
1959ರ ಡಿಸೆಂಬರ್ 16ರಂದು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಜನಿಸಿದ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಪುತ್ರ. ಅವರು ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಜೆಡಿಎಸ್ ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆತ್ಮನಿರ್ಭರ ಭಾರತದ ಗುರಿಯತ್ತ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಅವರ ಕೊಡುಗೆಗಳನ್ನು ಪ್ರಧಾನಿ ಮೋದಿ ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮವನ್ನು ಕುಮಾರಸ್ವಾಮಿ ಸರಳವಾಗಿ ಆಚರಿಸುತ್ತಿದ್ದು, ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಾಶಯಗಳ ಮಳೆಗರೆದಿದ್ದಾರೆ. ಸಾರ್ವಜನಿಕ ಸೇವೆಯೇ ತಮಗೆ ಸಿಗುವ ಅತ್ಯುತ್ತಮ ಉಡುಗೊರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ರೈತರ ಹಿತ, ಗ್ರಾಮೀಣ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟಗಳಿಂದ ಗುರುತಿಸಿಕೊಂಡಿರುವ ಕುಮಾರಸ್ವಾಮಿ, ಕೇಂದ್ರ ಸಚಿವರಾಗಿ ರಾಷ್ಟ್ರವನ್ನು ಆತ್ಮನಿರ್ಭರತೆಯ ದಿಕ್ಕಿನಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ದೇಶದ ವಿವಿಧ ಭಾಗಗಳಿಂದ ಶುಭಾಶಯಗಳು ಹರಿದು ಬರುತ್ತಿವೆ.