ಕಣ್ಣೂರು, ಜು 10 (DaijiworldNews/SM): ವಿದೇಶದಿಂದ ಆಗಮಿಸಿದ ಪ್ರಯಾಣಿಕನೊಬ್ಬ ಅಕ್ರಮ ಚಿನ್ನ ಸಾಗಾಟ ನಡೆಸುತ್ತಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿರುವಂತಹ ಘಟನೆಯೊಂದು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮಲಪುರಂ ನಿವಾಸಿ ಶಬ್ಬೀರ್ ಆರೋಪಿಯಾಗಿದ್ದು, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ದೋಹದಿಂದ ಆಗಮಿಸಿದ ಶಬ್ಬೀರ್ 2 ಕೆಜಿ 800ಗ್ರಾಂ ಚಿನ್ನವನ್ನು ಡ್ರಿಲ್ಲಿಂಗ್ ಯಂತ್ರದಲ್ಲಿಟ್ಟುಕೊಂಡು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ. ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಚಿನ್ನ ಸಾಗಾಟ ಪತ್ತೆಯಾಗಿದೆ. ಆರೋಪಿ ಸಾಗಾಟ ನಡೆಸುತ್ತಿದ್ದ ಚಿನ್ನದ ಮೌಲ್ಯ ಬರೋಬ್ಬರಿ 98 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.