ಬೆಂಗಳೂರು, ಜು 10 (DaijiworldNews/SM): ರಾಜ್ಯದಲ್ಲಿನ ಕಾಂಗ್ರೆಸ್ – ಜೆಡಿಸ್ ಮೈತ್ರಿ ಸರಕಾರ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಸರಕಾರ ಅಳಿವು ಉಳಿವಿನ ಕುರಿತು ಕ್ಷ್ಣಣಕ್ಷಣಕ್ಕೂ ಹೊಸ ತಿರುವನ್ನು ಪಡೆದುಕೊಳ್ಳುತ್ತಿವೆ. ಈ ನಡುವೆ ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಭೇಟಿಯಾಗಲೆಂದು ತೆರಳಿದ್ದ ಡಿಕೆಶಿಯವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆದರೆ, ಇದೀಗ ಅವರನ್ನು ಬಲವಂತವಾಗಿ ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಡಿ ಕೆ ಶಿವಕುಮಾರ್ ಅವರನ್ನು ಪೊಲೀಸರು ಬಲವಂತವಾಗಿ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿಂದ ಬೆಂಗಳೂರಿಗೆ ಅವರನ್ನು ಮರಳಿ ಕಳುಹಿಸುತ್ತಿದ್ದಾರೆ. ಇದಕ್ಕೆ ಎಲ್ಲಾ ರೀತಿಯ ಕಾರ್ಯಗಳನ್ನು ನಡೆಸಿ ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದಂತೆ ರಾಜೀನಾಮೆ ಸಲ್ಲಿಸಿ ಮುಂಬೈಗೆ ದೌಡಾಯಿಸಿರುವ ಅತೃಪ್ತ ಶಾಸಕರನ್ನು ಬೆಂಗಳೂರಿಗೆ ಕರೆದೇಕೊಂಡು ಬರುತ್ತೇನೆ ಎಂಬ ವಿಶ್ವಾಸದೊಂದಿಗೆ ಡಿಕೆಶಿ ಮುಂಬೈಗೆ ತೆರಳಿದ್ದರು.
ತನ್ನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗುವ ವಿಶ್ವಾಸವನ್ನು ಹೊಂದಿದ್ದರು. ಆದರೆ ಇದೀಗ ಅವರ ಪ್ರಯತ್ನ ವಿಫಲವಾಗಿದೆ. ಮುಂಬಯಿ ಪೊಲೀಸರಿಂದ ಬಲವಂತವಾಗಿ ವಿಮಾನ ಮೂಲಕ ಬೆಂಗಳೂರಿಗೆ ಕಳುಹಿಸಲ್ಪಡುತ್ತಿದ್ದಾರೆ. ಆ ಮೂಲಕ ಸಮ್ಮಿಶ್ರ ಸರಕಾರಕ್ಕೆ ಇದ್ದಂತಹ ಮಹಾನ್ ಅಸ್ತ್ರವೊಂದು ಫಲಪ್ರದವಾಗಿಲ್ಲ.
ಈ ನಡುವೆ ಮತ್ತಿಬ್ಬರು ಶಾಸಕರ ರಾಜೀನಾಮೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾಂಗ್ರೆಸ್ ಶಾಸಕರಾದ, ವಸತಿ ಖಾತೆ ಸಚಿವ ಎಂ ಟಿ ಬಿ ನಾಗರಾಜ್ ಮತ್ತು ಕೆ. ಸುಧಾಕರ್ ಅವರು ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರಕಾರಕ್ಕೆ ಹೊಸ ಶಾಕ್ ನೀಡಿದ್ದಾರೆ.