ಬೆಂಗಳೂರು, ಜು 10 (DaijiworldNews/SM): ರಾಜ್ಯದಲ್ಲಿ ಅತೃಪ್ತರ ಹವಾ ಜೋರಾಗಿರುವುದು ದೋಸ್ತಿ ಪಕ್ಷಗಳ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಇಂದು ವಿಧಾನಸೌಧದಲ್ಲಿ ಹೈಡ್ರಾಮ ನಡೆದಿದೆ. ಅತೃಪ್ತ ಶಾಸಕ ಡಾ.ಸುಧಾಕರ್ ಅವರನ್ನು ಒತ್ತಾಯ ಪೂರ್ವಕವಾಗಿ ಕರೆದೊಯ್ಯಲಾಗಿದೆ ಎಂಬ ಆರೋಪಕ್ಕೆ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಡಾ.ಸುಧಾಕರ್ ಅವರು ನಮ್ಮ ಶಾಸಕ ಹಾಗೂ ನಮ್ಮ ಸ್ನೇಹಿತ. ಮೈತ್ರಿ ಪಕ್ಷದಿಂದ ಯಾರೂ ಕೂಡ ಸುಧಾಕರ್ಗೆ ಹಲ್ಲೆ ನಡೆಸಿಲ್ಲ. ಗೂಂಡಾಗಿರಿ ಮಾಡಿರುವುದು ಬಿಜೆಪಿ. ನಮ್ಮ ಶಾಸಕ ಸುಧಾಕರ್, ಅವರನ್ನು ನಮ್ಮ ನಾಯಕರು ಕರೆದುಕೊಂಡು ಬಂದಿದ್ದಾರೆ. ಆದರೆ, ಬಿಜೆಪಿಗೂ ಅವರಿಗೂ ಏನು ಸಂಬಂಧ ಎಂದು ಅವರು ಪ್ರಶ್ನಿಸಿದ್ದಾರೆ. ಸುಧಾಕರ್ ಬಿಜೆಪಿ ಶಾಸಕರಲ್ಲ. ಅವರು ನಮ್ಮ ಶಾಸಕರು.
ಅವರು ಕೇವಲ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಂಗೀಕಾರ ಆಗುವ ತನಕ ಅವರು ನಮ್ಮ ಪಕ್ಷದ ಶಾಸಕ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.