ನವದೆಹಲಿ, ಜು11(Daijiworld News/SS): ಅಯೋಧ್ಯೆ ಶ್ರೀರಾಮಮಂದಿರ ಭೂ ವಿವಾದದ ವಿಚಾರಣೆಯನ್ನು ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಪೀಠ ಗುರುವಾರ (ಜು11) ನಡೆಸಲಿದೆ.
ಭೂ ವಿವಾದ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಗೋಪಾಲ್ ಸಿಂಗ್ ವಿಶಾರದ್, ಪ್ರಕರಣದ ವಿಚಾರಣೆ ಆಮೆಗತಿಯಲ್ಲಿ ಸಾಗಿದೆ. ಸಂಧಾನ ಸಮಿತಿಯಿಂದಲೂ ಯಾವುದೇ ಥರದ ಪ್ರಗತಿ ಸಾಧ್ಯವಾಗಿಲ್ಲ. ಹಾಗಾಗಿ ಕೋರ್ಟ್ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು ಎಂದು ಸಿಜೆಐ ನೇತೃತ್ವದ ಪೀಠಕ್ಕೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಜೆಐ ಗೊಗೊಯ್, ನಾವು ಇದನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಂಧಾನ ಪ್ರಕ್ರಿಯೆಯ ಪ್ರಗತಿ ಹಾಗೂ ಇತರ ಅರ್ಜಿದಾರರ ಮನವಿಗಳ ವಿಚಾರಣೆಯನ್ನು ಗುರುವಾರ ಸುಪ್ರೀಂಕೋರ್ಟ್ ನಡೆಸಲಿದೆ.
ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಎಫ್.ಎಫ್.ಐ. ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಗೆ ಆಗಸ್ಟ್ 15ರವರೆಗೆ ಮಧ್ಯಸ್ಥಿಕೆ ನಡೆಸಿ ಸಂಧಾನಕ್ಕೆ ಯತ್ನಿಸಲು ಸಿಜೆಐ ನೇತೃತ್ವದ ಪೀಠ ನಿರ್ದೇಶಿಸಿತ್ತು. ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡಾ ಮತ್ತು ರಾಮ್ ಲಲ್ಲಾ ನಡುವೆ 2.77 ಎಕರೆ ಅಯೋಧ್ಯೆ ರಾಮಜನ್ಮಭೂಮಿಯನ್ನು ಸಮಾನವಾಗಿ ಹಂಚಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ 14 ಅರ್ಜಿಗಳು ಸಲ್ಲಿಕೆಯಾಗಿವೆ.
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.