ಬೆಂಗಳೂರು, ಜು11(Daijiworld News/SS): ರಾಜ್ಯ ರಾಜಕೀಯ ಹೈ ಡ್ರಾಮಾ ಮುಂದುವರಿದಿದೆ. ರಾಜ್ಯದ ಮೈತ್ರಿ ಸರಕಾರ ಉಳಿಸಿಕೊಳ್ಳುವ ಅಂತಿಮ ಸಾಹಸ ನಡೆಯುತ್ತಿದೆ. ಶಕ್ತಿ ಕೇಂದ್ರ ವಿಧಾನಸೌಧ ಭಾರೀ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಜು.11 ರಿಂದ ಜು.14ರ ವರೆಗೆ, ಬೆಳಗ್ಗೆ 6 ರಿಂದ ರಾತ್ರಿ 12ರ ವರೆಗೆ ವಿಧಾನಸೌಧದಿಂದ 2 ಕಿಲೋ ಮೀಟರ್ ಸುತ್ತ ಕಲಂ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ರಾಜಕೀಯ ಮುಖಂಡರು, ಬೆಂಬಲಿಗರು, ಕಾರ್ಯಕರ್ತರ ಮಧ್ಯೆ ಸಂಘರ್ಷಗಳು ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಿಷೆಧಾಜ್ಞೆ ಜಾರಿಗೆ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ವಿಧಾನಸೌಧದ ಒಳಗೆ ಹಾಗೂ ಹೊರಗೆ ರಾಜಕೀಯ ಪಕ್ಷಗಳ ಮುಖಂಡರು, ಅವರ ಅನುಯಾಯಿಗಳು ಹಾಗೂ ಕಾರ್ಯಕರ್ತರು ಸೇರಲಿದ್ದಾರೆ. ಅವರೆಲ್ಲ ಏಕಕಾಲದಲ್ಲೇ ಪ್ರತಿಭಟನೆ ಮತ್ತು ಧರಣಿ ನಡೆಸುವ ಸಾಧ್ಯತೆ ಇದೆ. ಆ ರೀತಿಯಾದರೆ ಪರಸ್ಪರ ಘರ್ಷಣೆ ಉಂಟಾಗಲಿದೆ. ವಿಧಾನಸೌಧ ಸಿಬ್ಬಂದಿಯ ಕೆಲಸಕ್ಕೆ ತೊಂದರೆಯಾಗಲಿದೆ. ಕಾನೂನು ಸುವ್ಯವಸ್ಥೆಗೂ ಧಕ್ಕೆಯಾಗಿ, ಸಂಚಾರ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತದೆ. ಶಾಂತಿ ಕಾಪಾಡುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ.