ಡೆಹ್ರಾಡೂನ್ , ಜು 11 (Daijiworld News/MSP): ಬಿಜೆಪಿಯಿಂದ ಈಗಾಗಲೇ ಮೂರು ತಿಂಗಳಿಗಾಗಿ ಅಮಾನತಾಗಿರುವ ಉತ್ತರಾಖಂಡದ 'ಬಿಜೆಪಿ ಶಾಸಕ ಪ್ರಣವ್ ಸಿಂಗ್', ಕೈಯಲ್ಲಿ ರಿವಾಲ್ವರ್ ಹಿಡಿದು, ಪೆಗ್ಗು ಹಾಕ್ತಾ ಡಾನ್ಸ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಅವರನ್ನ 6 ವರ್ಷ ಪಕ್ಷದಿಂದಲೇ ಕಿತ್ತು ಹಾಕುವ ಸಾಧ್ಯತೆ ಇದೆ.
ಪತ್ರಕರ್ತರನ್ನು ಬೆದರಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಪ್ರಣವ್, ಮೂರು ತಿಂಗಳವರೆಗೆ ಅಮಾನತುಗೊಂಡಿದ್ದರು. ವೀಡಿಯೋ ತುಣುಕಿನಲ್ಲಿ ಪ್ರಣವ್ ಸಿಂಗ್, ಒಮ್ಮೆ ಬಾಯಲ್ಲಿ ಗನ್ ಕಚ್ಚಿ ಹಿಡಿದು ಮತ್ತೊಮ್ಮೆ ಕೈಯಲ್ಲಿ ಗನ್ ಹಾಗೂ ಬಾಟಲಿ ಹಿಡಿದುಕೊಂಡು ಮದ್ಯಪಾನ ಮಾಡುತ್ತಾ ಡಾನ್ಸ್ ಮಾಡುತ್ತಿರುವ 45 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಉತ್ತರಾಖಂಡ್ ಬಿಜೆಪಿಯನ್ನು ತೀವ್ರ ಮುಜುಗರಕ್ಕೆ ಒಳಪಡಿಸಿದೆ.ಅವರ ಬಳಿ ಇರುವ ಬಂದೂಕು ಹಾಗೂ ಪಿಸ್ತೂಲ್ ಪರವಾನಿಗೆ ಹೊಂದಿದವೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ "ರಿವಾಲ್ವರ್ ಹೊಂದುವುದು ಹಾಗೂ ಮದ್ಯ ಸೇವಿಸುವುದು ಅಪರಾಧವೇ ಎಂದು ಪ್ರಶ್ನಿಸಿದ್ದು ನಾನೇನು ರಿವಾಲ್ವರ್ ಹಿಡಿದು ಯಾರನ್ನು ಬೆದರಿಸಿಲ್ಲ" ಎಂದಿದ್ದಾರೆ
ಈ ನಡುವೆ ಪ್ರಣವ್ ಅವರಿಗೆ ಬಿಜೆಪಿ ಪಕ್ಷ ಶೋಕಾಸ್ ನೋಟಿಸ್ ನೀಡಿದೆ. ಹಾಗೇ ಕೇಂದ್ರ ನಾಯಕರಿಗೆ ಪತ್ರ ಬರೆದು, ಪ್ರಣವ್ರನ್ನ 6 ವರ್ಷ ಅಮಾನತು ಮಾಡುವಂತೆ ಶಿಫಾರಸು ಮಾಡಿದೆ.