ಬೆಂಗಳೂರು, ಜು 11 (Daijiworld News/MSP): ಸರ್ಕಾರ ಉಳಿಸಿಕೊಳ್ಳುವ ಮೈತ್ರಿ ಪಕ್ಷಗಳ ಸರ್ಕಸ್ ವಿಫಲವಾಗಿದ್ದು, ಹೀಗಾಗಿ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ನಾಳೆ ಅಂದರೆ ಜುಲೈ 12ರಂದು ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಇದೇ ಅಧಿವೇಶನದ ಮೊದಲ ದಿನವೇ ಸಿಎಂ ರಾಜೀನಾಮೆ ಸಲ್ಲಿಸಿ ವಿದಾಯ ಭಾಷಣ ಮಾಡುವ ಸಾಧ್ಯತೆ ಹೆಚ್ಚಿದೆ.
ಶತಾಯಗತಾಯ ಸರ್ಕಾರವನ್ನು ಹೇಗಾದರೂ ಮಾಡು ಉಳಿಸಿಕೊಳ್ಳಲೇಬೇಕು ಎನ್ನುವ ಕಾಂಗ್ರೆಸ್ ನಾಯಕರ ಹಾಗೂ ಜೆಡಿಎಸ್ ನಾಯಕರ ಪ್ರಯತ್ನದ ಹೊರತಾಗಿಯೂ ಬುಧವಾರ ಮತ್ತಿಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಉಭಯ ಪಕ್ಷದ ನಾಯಕರಿಗೂ ಸರ್ಕಾರ ಉಳಿಸುವ ಆಸೆ ಕ್ಷೀಣಿಸಿದೆ.
ಈ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಸಚಿವ ಸಂಪುಟ ಸಭೆ ಕರೆದಿದ್ದು, ಇದು ಸರ್ಕಾರ ಬಹುತೇಕ ಕೊನೆಯ ಸಂಪುಟ ಸಭೆ ಆಗಿದೆ. ಇದೇ ಸಭೆಯಲ್ಲಿ ರಾಜೀನಾಮೆಗೆ ಸಂಬಂಧಿಸಿದಂತೆ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.’
ಮೈತ್ರಿ ಸರ್ಕಾರದ 14 ಶಾಸಕರ ದಿಢೀರ್ ರಾಜೀನಾಮೆಗೆ ತತ್ತರಿಸಿ ಗುಟುಕು ಜೀವ ಉಳಿಸಿಕೊಂಡಿದ್ದ ಸರ್ಕಾರದ ನಡೆಯ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದೆ.