ಬಿಜ್ನೋರ್, ಜು11(Daijiworld News/SS): ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಪೊಲೀಸರು ಮದರಸಾದ ಮೇಲೆ ದಾಳಿ ನಡೆಸಿದ್ದು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.
ಮೂಲಗಳ ಪ್ರಕಾರ, ದಾಳಿ ವೇಳೆ ಆರು ಜನರನ್ನು ಬಂಧಿಸಲಾಗಿದೆ. ಮಾಹಿತಿ ಮೇರೆಗೆ ಪೊಲೀಸರು ಶೆರ್ಕೋಟ್ ಪ್ರದೇಶದ ಕಂಧ್ಲಾ ರಸ್ತೆಯಲ್ಲಿನ ದಾರುಲ್ ಕುರಾನ್ ಹಮೀಡಿಯಾ ಮದರಸಾ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವೃತ್ತ ಅಧಿಕಾರಿ (ಸಿಒ) ಕೃಪಾ ಶಂಕರ್ ಕಣ್ಣೌಜಿಯಾ ತಿಳಿಸಿದ್ದಾರೆ.
ದಾಳಿ ವೇಳೆ ವಶಕ್ಕೆ ಪಡೆದ ಆರೋಪಿಗಳನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪೈಕಿ ಓರ್ವ ಬಿಹಾರಕ್ಕೆ ಸೇರಿದವನಾಗಿದ್ದು, ಈತ ಮದರಸಾದಲ್ಲಿ ಶಿಕ್ಷಕನಾಗಿದ್ದ ಎನ್ನಲಾಗಿದೆ.
ಮದರಸಾದಲ್ಲಿ ಸುಮಾರು 25 ವಿದ್ಯಾರ್ಥಿಗಳಿದ್ದು, ಅವರಲ್ಲಿ 14 ಮಂದಿ ಬಿಹಾರಕ್ಕೆ ಸೇರಿದವರು. ಈ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.