ನವದೆಹಲಿ, ಜು11(Daijiworld News/SS): ಅಯೋಧ್ಯೆ ಶ್ರೀ ರಾಮ ಮಂದಿರದ ಭೂ ವಿವಾದವನ್ನು ಸಂಧಾನ ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಂತೆ ತಾನು ಕೊಟ್ಟಿದ್ದ ಸೂಚನೆ ಮೇರೆಗೆ ಇದುವರೆಗೆ ಆಗಿರುವ ಪ್ರಗತಿ ಕುರಿತು ಜು.18ಕ್ಕೆ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠ ಅಯೋಧ್ಯೆ ಭೂವಿವಾದ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ಪೀಠ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ತ್ರಿಸದಸ್ಯ ಸಂಧಾನ ಸಮಿತಿಗೆ, ಸಂಧಾನ ಪ್ರಕ್ರಿಯೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಮುಂಬರುವ ಜುಲೈ 18ರೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು, ಅದೇ ದಿನಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ಅಂತೆಯೇ ಸುಪ್ರೀಂ ಕೋರ್ಟ್'ಗೆ ಪ್ರಸ್ತುತ ಸಲ್ಲಿಸಲಾಗಿರುವ ಹಾಲಿ ಸ್ಥಿತಿಗತಿ ವರದಿ ಕುರಿತು ಪ್ರಸ್ತಾಪಿಸಿದ ಕೋರ್ಟ್, ಪ್ರಸ್ತುತ ವರದಿಯ ಮೇರೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಜುಲೈ 25ರವರೆಗೂ ಕೋರ್ಟ್ ದಿನಂ ಪ್ರತಿಯ ಸಂಧಾನ ಪ್ರಕ್ರಿಯೆಯನ್ನು ಪರಿಶೀಲಿಸುತ್ತದೆ ಎಂದು ಹೇಳಿದೆ.
ಹಲವು ದಶಕಗಳಿಂದಲೂ ಇರುವ ಈ ವಿವಾದವನ್ನು ಸಂಧಾನ ಮಾತುಕತೆ ಮೂಲಕ ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಇದಕ್ಕಾಗಿ ಆಗಸ್ಟ್ 15ರವರೆಗೆ ಸಮಯಾವಕಾಶ ನೀಡಿತ್ತು. ಸಂಧಾನ ಮಾತುಕತೆ ತುಂಬಾ ಗುಪ್ತವಾಗಿ ನಡೆಯಬೇಕು ಮತ್ತು ಈ ಅಂಶಗಳು ಯಾವುದೇ ಕಾರಣಕ್ಕೂ ಬಹಿರಂಗಗೊಳ್ಳಬಾರದು ಎಂದು ಹಿಂದು ಹಾಗೂ ಮುಸ್ಲಿಂ ಸಂಘಟನೆಗಳ ನಾಯಕರಿಗೆ ಸೂಚಿಸಿತ್ತು.
ಆದರೆ, ಸಂಧಾನ ಮಾತುಕತೆಯಲ್ಲಿ ನಿರೀಕ್ಷಿತ ಪ್ರಗತಿಗಳಾಗಿಲ್ಲ. ಮಾತುಕತೆಗಳು ಯಶಸ್ವಿಯಾಗುವ ನಿರೀಕ್ಷೆಯೂ ಇಲ್ಲ ಎಂದು ಗುರುವಾರದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ನಿರ್ಧಾರ ಕೈಗೊಂಡಿದೆ.