ಬೆಂಗಳೂರು, ಜು11(Daijiworld News/SS): ನಾನು ರಾಜೀನಾಮೆ ಕೊಡುವ ಪರಿಸ್ಥಿತಿ ಉದ್ಭವವಾಗಿಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನ್ಯಾಕೆ ರಾಜೀನಾಮೆ ನೀಡಲಿ..? ಈ ಹಿಂದೆ 18 ಶಾಸಕರು ಯಡಿಯೂರಪ್ಪ ಅವರ ವಿರುದ್ಧ ನಿಂತಿದ್ದರು. ಆಗ ಅವರೇನು ರಾಜೀನಾಮೆ ಕೊಟ್ಟಿದ್ದರಾ? 2008-09ರಲ್ಲಿ ಏನಾಗಿತ್ತು ಎಂಬುದನ್ನು ಅವರು ಒಮ್ಮೆ ನೆನಪು ಮಾಡಿಕೊಳ್ಳಲಿ. ನಾನು ರಾಜೀನಾಮೆ ಕೊಡುವಂಥ ಪರಿಸ್ಥಿತಿ ಉದ್ಭವವಾಗಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿನ ಸಮ್ಮಿಶ್ರ ಸರ್ಕಾರಕ್ಕೆ ಅನೇಕ ಸಂಕಷ್ಟದ ಪರಿಸ್ಥಿತಿ ಬಂದರೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆತ್ಮವಿಶ್ವಾಸದ ಬಗ್ಗೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಶಾಸಕರ ಸರಣಿ ರಾಜೀನಾಮೆ ನಂತರ ಅಗತ್ಯ ಕ್ರಮಗಳನ್ನು ಕೈಗೊಂಡರೂ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಕುಮಾರಸ್ವಾಮಿ ಅವರು ರಾಜೀನಾಮೆ ಸಲ್ಲಿಸಿದರೆ, ಬಿಜೆಪಿ ತನ್ನ ಹಕ್ಕು ಮಂಡನೆ ಮಾಡಲು ಮುಂದಾಗಬಹುದು ಎಂಬ ಸುದ್ದಿ ಇತ್ತು. ಆದರೆ, ಕುಮಾರಸ್ವಾಮಿ ರಾಜೀನಾಮೆ ಕೊಡುವಂಥ ಪರಿಸ್ಥಿತಿ ಉದ್ಭವವಾಗಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ - ಜೆಡಿಎಸ್ ನಾಯಕರು ರಿವರ್ಸ್ ಆಪರೇಷನ್ ಸೇರಿದಂತೆ ಎಲ್ಲಾ ರೀತಿಯ ತಂತ್ರಗಾರಿಕೆ ಬಳಸಲು ಮುಂದಾಗಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ನಾಯಕರು ಆಪರೇಷನ್ ಕಮಲಕ್ಕೆ ಒಳಗಾಗದಂತೆ ತಡೆಯುವ ಕೆಲಸಗಳು ರಾಜಕೀಯ ವಲಯದಲ್ಲಿ ನಿರಂತರವಾಗಿ ನಡೆಯುತ್ತಿದೆ.